Thursday, November 21, 2024

ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ ಆರೋಪ; ಮುಂದುವರಿದ ಹಾಲಿ ಮಾಜಿ ಶಾಸಕರ ಜಟಾಪಟಿ

Must read

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರ ಆರೋಪದ ಕುರಿತಂತೆ ಹಾಲಿ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ಮಾಜಿ ಶಾಸಕ ರಘುಪತಿ ಭಟ್ ನಡುವೆ ಜಟಾಪಟಿ ಮುಂದುವರಿದಿದೆ.
ಬ್ಯಾಂಕ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅವರಿಗೆ ಪತ್ರ ಬರೆದಿರುವ ರಘುಪತಿ ಭಟ್ ಅವರು, ಮಲ್ಪೆ ಶಾಖೆಯ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಸಾಲ ಪತ್ರದಲ್ಲಿರುವುದು ನಮ್ಮ ಸಹಿ ಅಲ್ಲ ಎಂಬುದಾಗಿ ಸಂತ್ರಸ್ತರು ದಾಖಲಿಸಿರುವ ಎಫ್‌ಐಆರ್‌ಗೆ ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ಯಶ್‌ಪಾಲ್ ಸುವರ್ಣ ಹೈಕೋರ್ಟ್ ನಲ್ಲಿ ವಿಧಿಸಿರುವ ತಡೆಯಾಜ್ಞೆಯನ್ನು ಸ್ವಯಂ ಹಿಂಪಡೆದು ತನಿಖೆಯನ್ನು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.

ಯಶ್‌ಪಾಲ್ ಸುವರ್ಣ ಸಿ.ಬಿ.ಐ., ಇ.ಡಿ. ಇನ್ನಿತರ ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿರುವುದು ಪ್ರಶಂಸಾರ್ಹವಾಗಿದೆ. ಆದರೆ ಈ ತನಿಖೆಗಳನ್ನು ನಡೆಸುವ ಮುಂಚಿತವಾಗಿ ತಮ್ಮದೇ ವ್ಯಾಪ್ತಿಯಲ್ಲಿ ಉಡುಪಿ ಹಾಗೂ ಇನ್ನಿತರ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ತರು ಈಗಾಗಲೇ ನೀಡಿರುವ ದೂರಿಗೆ ಆಗಿರುವ ಎಫ್‌ಐಆರ್ ಮೇಲೆ ತಾವು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ಈ ತಡೆಯಾಜ್ಞೆಯನ್ನು ತೆರವುಗೊಳಿಸಿ, ತನಿಖೆಗೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಂತ್ರಸ್ತರ ಸಾಲದ ಅರ್ಜಿಗಳಲ್ಲಿ ಹಾಗೂ ಸಾಲದ ದಾಖಲಾತಿಗಳಲ್ಲಿ ಸಂತ್ರಸ್ತರು ತಮ್ಮ ಸಹಿ ಅಲ್ಲ ಎಂದು ಹೇಳುತ್ತಿರುವ ಕಾರಣ ಈ ಸಹಿಗಳ ಸತ್ಯಸತ್ಯಾತೆಯನ್ನು ತಿಳಿಯಲು ಪೊಲೀಸ್ ಇಲಾಖೆಯ ಮೂಲಕ ಎಫ್‌ಎಸ್‌ಎಲ್(ವಿಧಿ ವಿಜ್ಞಾನ ಪ್ರಯೋಗಾಲಯ) ಪರೀಕ್ಷೆಗೆ ಕಳುಹಿಸಲು ಅನುವು ಮಾಡಿಕೊಡಬೇಕು. ಆದುದರಿಂದ ಹೈಕೋರ್ಟ್‌ನಿಂದ ತಡೆಯಾಜ್ಞೆ ಯನ್ನು ಹಿಂಪಡೆದು ನ್ಯಾಯಯುತವಾದ ತನಿಖೆ ನಡೆದು ಸತ್ಯಸತ್ಯಾತೆಯು ಹೊರಬರಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನನ್ನ ಈ ಹೋರಾಟ, ಅನ್ಯಾಯವಾಗಿದೆಯೆಂದು ತಮ್ಮ ಅಳಲು ತೋಡಿಕೊಂಡು ಸಹಾಯ ನಿರೀಕ್ಷಿಸಿದ ಸಂತ್ರಸ್ತರ ಹಿತ ಕಾಪಾಡುವುದೇ ಹೊರತು, ತಮ್ಮ ಅಥವಾ ಬ್ಯಾಂಕಿನ ವಿರುದ್ಧ ಆಗಿರುವುದಿಲ್ಲ. ಇದರಲ್ಲಿ ನನ್ನ ಯಾವುದೇ ವೈಯಕ್ತಿಕ ಹಿತಾಸಕ್ತಿಯಿರುವುದಿಲ್ಲ. ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿರುವ ಸಾಲಗಾರ ಸಂತ್ರಸ್ತರ ಪರ ಕಾನೂನು ಹೋರಾಟ ಮಾಡಲು ನಾನು ಇನ್ನು ಮುಂದೆಯೂ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಹೈಕೋರ್ಟ್ ತಡೆಯಾಜ್ಞೆ ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿ: ರಘುಪತಿ ಭಟ್ ಗೆ ಯಶ್ ಪಾಲ್ ಸುವರ್ಣ ತಿರುಗೇಟು

ಮಾಜಿ ಶಾಸಕ ರಘುಪತಿ ಭಟ್ ಇಂದು ಮತ್ತೊಮ್ಮೆ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ತನ್ನ ಸುಸ್ತಿದಾರರ ಎಫ್ ಐ ಆರ್ ವಿರುದ್ಧದ ತನಿಖೆಗೆ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿದೆ. ಅದನ್ನು ತಕ್ಷಣ ತೆರವು ಮಾಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಪತ್ರ ಬರೆದು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದು, ತಡೆಯಾಜ್ಞೆ ಪ್ರತಿ ರಘುಪತಿ ಭಟ್ ಬಳಿ ಇದ್ದರೆ ತಕ್ಷಣ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಾಧ್ಯಮಗಳಿಗೆ ನೀಡುವಂತೆ ಬ್ಯಾಂಕಿನ ಅಧ್ಯಕ್ಷ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ದಿನಾಂಕ ನವೆಂಬರ್ 9 ರಂದು ಪತ್ರಿಕಾಗೋಷ್ಟಿ ನಡೆಸಿ ರಘುಪತಿ ಭಟ್ ಆಧಾರ ರಹಿತ ಆರೋಪಗಳಿಗೆ ಬ್ಯಾಂಕಿನ ಆಡಳಿತ ಮಂಡಳಿ ಉತ್ತರ ನೀಡಿ ಯಾವುದೇ ತನಿಖೆಗೆ ಸ್ವಾಗತ ಎಂದು ತಿಳಿಸಿದರೂ, ಹತಾಶ ಮನಸ್ಥಿತಿಯ ರಘುಪತಿ ಭಟ್ ಇದೀಗ ನ್ಯಾಯಾಂಗ ವ್ಯವಸ್ಥೆಯನ್ನೇ ತಿರುಚಿ ಸುಳ್ಳು ಸುದ್ದಿ ಸೃಷ್ಟಿಸಿ ಮಾಧ್ಯಮಗಳು ಹಾಗೂ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ.

ರಘುಪತಿ ಭಟ್ ರವರು ಇದೀಗ ತಮ್ಮ ಸ್ವಾರ್ಥ ಸಾಧನೆಗಾಗಿ ಇಡೀ ಸಹಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದು, ಇದು ಇಡೀ ಸಹಕಾರಿ ಕ್ಷೇತ್ರಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here