ಉಡುಪಿ: ವಕ್ಫ್ ಬೋರ್ಡ್ ವಿಷಯದಲ್ಲಿ ಸರಕಾರದ ಕಾನೂನು ತುಂಬಾ ದುರ್ಬಲವಾಗಿದ್ದು, ಇದರಿಂದ ಜನರಿಗೆ ಬಹಳಷ್ಟು ಅನ್ಯಾಯ ಆಗುತ್ತಿದೆ. ಹಿಂದಿನಿಂದಲೂ ಮಠ ಮಂದಿರ, ಹಿಂದೂಗಳಿಗೆ ಅನ್ಯಾಯ ಆಗ್ತಾ ಬರುತ್ತಿದೆ. ಆದ್ದರಿಂದ ಸರಕಾರ ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ವಕ್ಫ್ ಬೋರ್ಡ್ ವಿವಾದದ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ಈ ವಿಚಾರದಲ್ಲಿ ರೈತರು ಮಾತ್ರವಲ್ಲ, ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅವರೆಲ್ಲರಿಗೂ ನ್ಯಾಯ ದೊರಕಿಸಿಕೊಡುವುದು ಸರಕಾರದ ಕರ್ತವ್ಯ. ಮಠ ಮಂದಿರಗಳ ಆಸ್ತಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಕೊಂಡಿದ್ದಾರೆ ಅದನ್ನು ಸರಿಪಡಿಸಬೇಕು. ವಕ್ಫ್ ಬೋರ್ಡ್ ಗೊಂದಲವನ್ನು ಅತೀ ಶೀಘ್ರವಾಗಿ ನ್ಯಾಯೋಚಿತವಾಗಿ ಬಗೆಹರಿಸಬೇಕು ಎಂದು ಶ್ರೀಗಳು ಸರಕಾರವನ್ನು ಒತ್ತಾಯಿಸಿದರು.