ಉಡುಪಿ: ಮುಡಾ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಜಮೀರ್ ಅಹ್ಮದ್ ಗೆ ಕುಮ್ಮಕ್ಕು ನೀಡಿ ವಕ್ಫ್ ಬೋರ್ಡ್ ಮೂಲಕ ‘ಲ್ಯಾಂಡ್ ಜಿಹಾದ್’ ಷಡ್ಯಂತ್ರವನ್ನು ರಚಿಸಿ ರಾಜ್ಯದ ಜನತೆಯನ್ನು ರೊಚ್ಚಿಗೆಬ್ಬಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆರೋಪಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಹಗರಣಗಳ ಸರಮಾಲೆಯಿಂದ ರಾಜ್ಯದ ಆರ್ಥಿಕತೆಯು ಸಂಪೂರ್ಣ ಹಳಿತಪ್ಪಿ ದಿವಾಳಿತನದ ಅಂಚಿಗೆ ತಲುಪಿದ್ದರೂ, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಪುಂಗಿ ಊದಿದ್ದ ಸಿದ್ದರಾಮಯ್ಯ ಇದೀಗ ವಕ್ಫ್ ಸಚಿವ ಜಮೀರ್ ಅಹ್ಮದ್ ಮೂಲಕ ವಕ್ಫ್ ಅದಾಲತ್ ನಡೆಸಿ, ರಾಜ್ಯಾದ್ಯಂತ ನೂರಾರು ವರ್ಷಗಳ ಇತಿಹಾಸವಿರುವ ಮಠ ಮಂದಿರ, ದೇವಸ್ಥಾನಗಳ ಸಹಿತ ರೈತರ ಸಿರಾಸ್ತಿಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರನ್ನು ಅನಧಿಕೃತವಾಗಿ ಸೇರ್ಪಡೆಗೊಳಿಸಿ ಮುಸ್ಲಿಂ ತುಷ್ಟಿೇಕರಣ ನೀತಿಯ ಪರಮಾವಧಿಯನ್ನು ಪ್ರದರ್ಶಿಸಿರುವುದು ಅತ್ಯಂತ ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ಮುಡಾ ಹಗರಣದಲ್ಲಿ ಸೈಟು ವಾಪಾಸು ನೀಡಿದ ಪ್ರಹಸನದಂತೆ, ಇದೀಗ ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದಿರುವ ಸಿ.ಎಂ. ಸಿದ್ದರಾಮಯ್ಯ 1974ರ ಗಜೆಟ್ ನೋಟಿಫಿಕೇಶನ್ ಹಿಂಪಡೆದು ರದ್ದು ಮಾಡುವ ಎದೆಗಾರಿಕೆಯನ್ನು ತೋರುವುದು ಇಂದಿನ ಅಗತ್ಯತೆ. ಹಿಂದೂ ವಿರೋಧಿ ನೀತಿಯನ್ನೇ ರಾಜಕೀಯ ಬಂಡವಾಳವನ್ನಾಗಿಸಿಕೊಂಡಿರುವ ಸಿದ್ದರಾಮಯ್ಯ ತನ್ನ ಸ್ವಯಂಕೃತ ಅಪರಾಧದಿಂದ ಕಂಗೆಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಲ್ಲಿ ತೊಡಗಿರುವುದು ಹಾಸ್ಯಾಸ್ಪದವಾಗಿದೆ.
ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಮತ್ತು ಹಿಂದೂ ವಿರೋಧಿ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಹೊಂದಿರುವ ಸಿದ್ದರಾಮಯ್ಯ ಸ್ವಯಂ ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡು, ಪ್ರಸಕ್ತ ಕೇವಲ ಪತ್ರಿಕಾ ಹೇಳಿಕೆಗೆ ಮಾತ್ರ ಸೀಮಿತಗೊಂಡಿರುವುದು ವಾಸ್ತವ. ಯಾವುದೇ ದೂರದರ್ಶಿತ್ವದ ಯೋಜನೆ ಇಲ್ಲದೆ ಅಧಿಕಾರಕ್ಕೇರುವ ಒಂದೇ ಉದ್ದೇಶದಿಂದ ಘೋಷಿಸಿರುವ ನಕಲಿ ಗ್ಯಾರಂಟಿಗಳು ರಾಜ್ಯದ ಬೊಕ್ಕಸಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಬಗ್ಗೆ ಸ್ವತಃ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆಯವರು ಚಾಟಿ ಬೀಸಿರುವುದು ಜಗಜ್ಜಾಹೀರಾಗಿದ್ದರೂ, ಕಳಂಕಿತ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರು ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾದ ಮಾತುಗಳನ್ನಾಡುವ ಹುಚ್ಚು ಸಾಹಸಕ್ಕೆ ಮುಂದಾಗಿರುವುದು ವಿಪರ್ಯಾಸ.
ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅತೀವ ಮುಸ್ಲಿಂ ತುಷ್ಟಿೇಕರಣದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ತಕ್ಷಣ ವಕ್ಫ್ ಸಚಿವ ಜಮೀರ್ ಅಹ್ಮದ್ ರಾಜೀನಾಮೆಯನ್ನು ಪಡೆದು, ರಾಜ್ಯಾದ್ಯಂತ ಪಹಣಿ ಪತ್ರಗಳಲ್ಲಿ ಅನಧಿಕೃತವಾಗಿ ನಮೂದಿಸಲ್ಪಟ್ಟ ವಕ್ಫ್ ಹೆಸರನ್ನು ರದ್ದುಪಡಿಸಿ, ನೋಟೀಸ್ ಹಿಂಪಡೆಯುವ ಮಾದರಿಯಲ್ಲೇ 1974ರ ಗಜೆಟ್ ನೋಟಿಫಿಕೇಶನ್ ಕೂಡಾ ಹಿಂಪಡೆದು ರದ್ದುಗೊಳಿಸಬೇಕು. ತಪ್ಪಿದಲ್ಲಿ ತಾಲೂಕು, ಜಿಲ್ಲೆ ಸಹಿತ ಇಡೀ ರಾಜ್ಯದಲ್ಲಿ ಚಾಲನೆಗೊಂಡಿರುವ ಬಿಜೆಪಿ ಪ್ರತಿಭಟನೆ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.