ಉಡುಪಿ: ಮಹಾಲಕ್ಷ್ಮೀ ಬ್ಯಾಂಕ್ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು, ತಮ್ಮ ಆರೋಪವನ್ನು ಸಾಬೀತು ಮಾಡಲು ಉಡುಪಿ ಕೃಷ್ಣ ಮಠ ಅಥವಾ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಪ್ರಮಾಣ ಮಾಡುವಂತೆ ಕೋರಿ ಬ್ಯಾಂಕ್ ನ ಸಿಬ್ಬಂದಿ ಪತ್ರ ಬರೆದಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ 3 ಬಾರಿ ಆಯ್ಕೆಯಾಗಿ, ವಿವಿಧ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಮಾಜದ ಓರ್ವ ಜವಾಬ್ದಾರಿಯುತ ವ್ಯಕ್ತಿಯಾಗಿರುವ ತಾವು ಮಹಾಲಕ್ಷ್ಮಿ ಬ್ಯಾಂಕ್ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಆಕ್ರಮ ನಡೆದಿರುವುದಾಗಿ ತಮ್ಮ ಆಧಾರರಹಿತ ಹೇಳಿಕೆಯಾಗಿದೆ.
ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ 46 ವರ್ಷಗಳ ಹಿಂದೆ ಮೊಗವೀರ ಸಮುದಾಯದ ಮುಖಂಡರು ಜೊತೆಗೂಡಿ ಸಹಕಾರಿ ತತ್ವದಡಿ ಬಡ ಮೀನುಗಾರರ ಸಹಿತ ಸಮಾಜದ ಸರ್ವರಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ದಿವಂಗತ ಮಲ್ಪೆ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಆರಂಭಗೊಂಡು ದಿವಂಗತ ಕೆ. ಸಿ. ಕುಂದರ್, ದಿವಂಗತ ಆನಂದ ಎನ್. ಪುತ್ರನ್ ರಂತಹ ವ್ಯಕ್ತಿಗಳು ಕಟ್ಟಿಬೆಳೆಸಿದ ಬ್ಯಾಂಕ್ ಇಂದು ಸಮಾಜದ ಸರ್ವರ ಸಹಕಾರದಿಂದ ಕರಾವಳಿ ಕರ್ನಾಟಕದ ಪ್ರತಿಷ್ಠಿತ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗಳಿಕೆಗೆ ಪಾತ್ರವಾಗಿರುವ ಬ್ಯಾಂಕ್ ಎಂಬುದು ಹೆಮ್ಮೆಯ ವಿಚಾರ.
ಇತ್ತೀಚಿನ ಕೆಲವು ದಿನಗಳಿಂದ ನಿರಂತರವಾಗಿ ಬ್ಯಾಂಕಿನ ವಿರುದ್ಧ ಹಲವಾರು ಮಂದಿ ಆಧಾರರಹಿತ ಆರೋಪಗಳನ್ನು ಮಾಡುತ್ತಾ ದಿನಪತ್ರಿಕೆ, ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ನಡೆಸುತ್ತಾ ಬ್ಯಾಂಕಿನ ಘನತೆ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದು, ಇದಕ್ಕೆ ಪೂರಕವಾಗಿ ತಾವು ಕೂಡ ನಿನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕಿನಲ್ಲಿ ಅಕ್ರಮ ನಡೆದಿದೆ ಎಂದು ಉಲ್ಲೇಖಿಸಿದ್ದೀರಿ.
ತಾವು ನಮ್ಮ ಬ್ಯಾಂಕಿನ ಓರ್ವ ಗ್ರಾಹಕರಾಗಿ ಬ್ಯಾಂಕಿನ ಕಾರ್ಯವೈಖರಿ ಹಾಗೂ ಆಡಳಿತ ವ್ಯವಸ್ಥೆಯನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದು, ತಾವು ಕೂಡ ಉಡುಪಿಯ ಪರಿವಾರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸಹಕಾರಿ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ, ಮಾಹಿತಿ ಇದ್ದರೂ ಬ್ಯಾಂಕಿನ ವಿರುದ್ಧ ಅಪಪ್ರಚಾರ ನಿರತ ವ್ಯಕ್ತಿಗಳ ಜೊತೆಗೂಡಿ ಸ್ವಲ್ಪವೂ ವಿಚಾರ ವಿಮರ್ಶೆ ಮಾಡದೇ ಬ್ಯಾಂಕಿನ ವಿರುದ್ಧ ಸುಳ್ಳು ಆರೋಪ ಮಾಡಿರುವುದು ದುರದೃಷ್ಟಕರ.
ನಿಮ್ಮ ಈ ಹೇಳಿಕೆಯಿಂದ ಬ್ಯಾಂಕಿನ ಸಿಬ್ಬಂದಿಗಳಾದ ನಮಗೆ ತೀವ್ರ ಬೇಸರವಾಗಿದ್ದು, ಸಿಬ್ಬಂದಿಗಳ ಘನತೆಗೆ ಈ ಸುಳ್ಳು ಆರೋಪದಿಂದ ಧಕ್ಕೆಯಾಗಿದ್ದು, ತಾವು ನಮ್ಮ ಬ್ಯಾಂಕ್ ಮೇಲೆ ತಾವು ಮಾಡಿರುವ ಆರೋಪವನ್ನು ಖಡಾಖಂಡಿತವಾಗಿ ನಿರಾಕರಿಸುತ್ತಿದ್ದೇವೆ. ಈ ಬಗ್ಗೆ ಯಾವುದೇ ಉನ್ನತ ಮಟ್ಟದ ತನಿಖೆಗೂ ಬದ್ಧರಾಗಿದ್ದೇವೆ.
ಈ ಬಗ್ಗೆ ಉಡುಪಿಯ ಆರಾಧ್ಯ ದೇವರಾದ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಹಾಗೂ ತಮ್ಮ ಊರಿನ ತಾವೇ ಮೊತ್ತೇಸರರಾಗಿರುವ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿಯೂ ಪ್ರಮಾಣ ಮಾಡಲು ಸಿದ್ಧರಿದ್ದು, ತಾವು ತಮ್ಮ ಆರೋಪವನ್ನು ಪ್ರಮಾಣಿಕರಿಸಲು ಬದ್ಧರಿದ್ದಲ್ಲಿ ನಿಮ್ಮ ಕುಟುಂಬ ಸದಸ್ಯರೊಂದಿಗೆ ನಮ್ಮೊಂದಿಗೆ ಭಾಗವಹಿಸುವಂತೆ ಹಾಗೂ ಈ ಸಾರ್ವಜನಿಕರಿಗೆ ಸತ್ಯಾಸತ್ಯತೆ ಸಾಬೀತು ಮಾಡುವಂತೆ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಸಿಬ್ಬಂದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.