Friday, November 22, 2024

ಸೆ.29ರಂದು ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭ

Must read

ಉಡುಪಿ: ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್‌ನ 20ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವು ಇದೇ ಸೆ.29ರಂದು ಬೆಳಿಗ್ಗೆ 9ರಿಂದ ಸಂಜೆ 4.30ರ ವರೆಗೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ತಿಳಿಸಿದರು.

ಉಡುಪಿ ಪತ್ರಿಕಾ ಭವನದಲ್ಲಿ ಇಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಎಚ್. ಎಸ್. ಶೆಟ್ಟಿ ವಹಿಸಲಿದ್ದಾರೆ. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಶುಭಾಶಂಸನೆಗೈಯಲಿದ್ದಾರೆ ಎಂದರು.

ಮಧ್ಯಾಹ್ನ 2.30ಕ್ಕೆ ಸಹಾಯಧನ ವಿತರಣಾ ಸಮಾರಂಭ ನಡೆಯಲಿದ್ದು, ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಿಆರ್‌ಎಂ ಇನ್‌ಫೋಸಿಸ್ ಮಂಗಳೂರಿನ ಉಪಾಧ್ಯಕ್ಷ ವಾಸುದೇವ ಕಾಮತ್ ಲ್ಯಾಪ್‌ಟಾಪ್ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಯಕ್ಷಗಾನ ಕಲಾರಂಗಕ್ಕೆ ಸುವರ್ಣ ವರ್ಷ ಹಾಗೂ ವಿದ್ಯಾಪೋಷಕ್‌ಗೆ ವಿಂಶತಿಯ ಸಂಭ್ರಮ. ಇದುವರೆಗೆ ಒಟ್ಟು 54 ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಐದು ಮನೆಗಳು ನಿರ್ಮಾಣ ಹಂತದಲ್ಲಿವೆ. ಈ ವರ್ಷದ ನಿರ್ಮಾಣಕ್ಕೆ ಹತ್ತು ಮನೆಗಳು ಆಯ್ಕೆಯಾಗಿವೆ. ಈ ವರ್ಷ ವಿದ್ಯಾಪೋಷಕ್‌ನ 1110 ವಿದ್ಯಾರ್ಥಿಗಳಿಗೆ 1,09,37,500- ರೂಪಾಯಿ ಹಾಗೂ ಯಕ್ಷಗಾನ ಕಲಾವಿದರ 72 ಮಕ್ಕಳಿಗೆ 6,12,500/- ರೂಪಾಯಿ ಸಹಾಯಧನವನ್ನು ಹಾಗೂ 10 ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಲಾರಂಗದ ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಎಸ್.ವಿ. ಭಟ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಹಾಗೂ ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಇದ್ದರು.

spot_img

More articles

LEAVE A REPLY

Please enter your comment!
Please enter your name here