ಉಡುಪಿ: ಲಡ್ಡು ಪ್ರಸಾದಕ್ಕೆ ಹಸುವಿನ ತುಪ್ಪದ ಬದಲು ಕೃತಕ ತುಪ್ಪ ಹಾಕಿದ್ದಾರೆ. ಅದನ್ನು ತುಪ್ಪ ಎಂದು ಕರೆಯಲು ಸಾಧ್ಯವಿಲ್ಲ. ಪ್ರಾಣಿಜನ್ಯ ಕೊಬ್ಬಿನ ಮಿಶ್ರಣದಿಂದ ಪ್ರಸಾದ ತಯಾರಿಸಿದ್ದಾರೆ. ಈ ಬೆಳವಣಿಗೆಯಿಂದ ಖೇದವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಅಯೋಧ್ಯೆಯಿಂದ ವಿಡಿಯೋ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳು, ಇದು ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ. ಇದು ದೇವರಿಗೆ ಬಗೆದಿರುವ ಅಪಚಾರ. ಸರಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ. ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವ, ಹಸುವನ್ನು ರಕ್ಷಿಸಿದವ ಶ್ರೀನಿವಾಸ ಅನ್ನೋದು ಇತಿಹಾಸ.ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ, ಇದೊಂದು ಅಪರಾಧವಾಗಿದೆ ಎಂದರು.
ಹಿಂದುಗಳ ಧಾರ್ಮಿಕ ಶ್ರದ್ದೆಯ ಮೇಲಿನ ಹಲ್ಲೆ ಇದು. ಮನೆಗಳಲ್ಲಿ ಕೂಡ ಇಂತಹ ತುಪ್ಪ ಬಳಸುವುದಿಲ್ಲ. ಧಾರ್ಮಿಕ ಶ್ರದ್ದಾ ಕೇಂದ್ರಗಳು, ಸರಕಾರದ ಹಿಡಿತದಲ್ಲಿ ಇರಬಾರದು. ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಕೈಯಲ್ಲಿರಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪು ಕೂಡ ಇದನ್ನೇ ಹೇಳಿದೆ. ತಡ ಮಾಡದೆ ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ, ಹಿಂದೂಗಳ ಸಂಸ್ಥೆಗೆ ತಿರುಪತಿ ದೇವಾಲಯದ ಆಡಳಿತ ನೀಡಿ ಎಂದು ಒತ್ತಾಯ ಮಾಡಿದ್ದಾರೆ.