ಉಡುಪಿ: ಉಡುಪಿ ಶ್ರೀಕಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಈ ಬಾರಿ ಅತ್ಯಂತ ವೈಭವ ಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಅದರಂತೆ ಆಗಸ್ಟ್ 1ರಿಂದ ಸೆಪ್ಟೆಂಬರ್ 1ರವರೆಗೆ ಒಂದು ತಿಂಗಳ ಕಾಲ ಶ್ರೀಕೃಷ್ಣ ಮಾಸೋತ್ಸವ, ಕೃಷ್ಣಜನ್ಮಾಷ್ಟಮಿ ಶ್ರೀಕಷ್ಣ ಲೀಲೋತ್ಸವ, ಲಡ್ಡೋತ್ಸವ, ಸಾಮೂಹಿಕ ಡೋಲೋತ್ಸವ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿ ಕೃಷ್ಣಮಠದ ಕನಕ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಶೇಷವಾಗಿ ಲಡ್ಡೋತ್ಸವದಲ್ಲಿ 108 ಬಗೆಯ ಲಡ್ಡುಗಳನ್ನು ತಯಾರಿಸಿ ಭಕ್ತರಿಗೆ ವಿತರಿಸಲಾಗುವುದು. ಜನ್ಮಾಷ್ಟಮಿಗೆ ಅನೇಕ ಬಗೆಯ ಲಡ್ಡು, ಚಕ್ಕುಲಿ ಮಾಡುವುದು ಸಂಪ್ರದಾಯ. ಕಾಲಕ್ರಮೇಣ ಈ ಸಂಪ್ರದಾಯ ಕ್ಷೀಣಿಸಿದೆ. ಈ ವೈಭವವನ್ನು ಮತ್ತೆ ಮರುಕಳಿಸುವ ನಿಟ್ಟಿನಲ್ಲಿ ಹಳೆ ಕಾಲದ ವಿವಿಧ ಬಗೆಯ ಲಡ್ಡುಗಳನ್ನು ಕೃಷ್ಣನಿಗೆ ಅರ್ಪಣೆ ಮಾಡಲಾಗುವುದು ಎಂದರು.
ಆ.1ರಂದು ಸಂಜೆ 5ಗಂಟೆಗೆ ಮಾಸೋತ್ಸವದ ಉದ್ಘಾಟನೆ ನಡೆಯಲಿದೆ. ಈ ಸಮಾರಂಭದಲ್ಲಿ ಅದಮಾರು ಹಿರಿಯ ಯತಿ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಸ್ವಾಮೀಜಿ, ರಾಜ್ಯ ಗೃಹ ಸಚಿವ ಪರಮೇಶ್ವರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಆ.22ರಿಂದ ಲಡ್ಡೋತ್ಸವ, ಆ.26ರಂದು ಜನ್ಮಾಷ್ಟಮಿ ದಿನ ಸಾಮೂಹಿಕ ತೊಟ್ಟಿಲು ಸೇವೆ, ಮುದ್ದುಕೃಷ್ಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 12.08ಕ್ಕೆ ಅರ್ಘ್ಯ ಪ್ರದಾನ ನಡೆಯಲಿದೆ. 27ರಂದು 3ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ, ರಥೋತ್ಸವ, ಹುಲಿವೇಷ ಕುಣಿತ ನಡೆಯಲಿದೆ. 28ರಂದು ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್ ಭಟ್, ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.