ಉಡುಪಿ: ಸುವರ್ಣ ನ್ಯೂಸ್ ಚಾನೆಲ್ ಟಿವಿಯ ಸುದ್ದಿ ಮಾಧ್ಯಮದ ವಿಡಿಯೋ ಬಳಸಿ ರಘುಪತಿ ಭಟ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಬ್ರೇಕಿಂಗ್ ನ್ಯೂಸ್ ಸುಳ್ಳು ಸುದ್ಧಿಯ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದರ ಬಗ್ಗೆ ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಕೆ. ರಘುಪತಿ ಭಟ್ ಅವರು ಚುನಾವಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ನನಗೆ ನೈಋತ್ಯ ಪದವೀಧರರ ಕ್ಷೇತ್ರದಾದ್ಯಂತ ಅಪಾರ ಬೆಂಬಲ ವ್ಯಕ್ತವಾಗಿರುವುದರಿಂದ ಕಳೆದ ನಾಲ್ಕೈದು ದಿನಗಳಿಂದ ಎದುರಾಳಿಗಳು ನನ್ನ ವಿರುದ್ಧ ಶಡ್ಯಂತ್ರ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ತೇಜೋವಧೆ ಹಾಗೂ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿದ್ದರು. ಆದರೆ ಚುನಾವಣೆಯ ಮುಂಚಿನ ದಿನ ರಾತ್ರಿ ಸುವರ್ಣ ಚಾನೆಲ್‌ನ ಬ್ರೇಕಿಂಗ್ ನ್ಯೂಸ್ ಎಂಬಂತೆ ಬಿಂಬಿಸಿ ನಾನು ಚುನಾವಣೆಯಿಂದ ಹಿಂದೆ ಸರಿದಿರುವುದಾಗಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಸುವರ್ಣ ಚಾನಲ್ ವರದಿಗಾರರಲ್ಲಿ ಪ್ರಶ್ನಿಸಿದಾಗ ನಮ್ಮ ಚಾನಲ್‌ನಲ್ಲಿ ಈ ಕುರಿತಾದ ಯಾವುದೇ ಸುದ್ಧಿಯನ್ನು ನಾವು ಬಿತ್ತರಿಸಿಲ್ಲ ಎಂದು ತಿಳಿಸಿದ್ದಾರೆ.
ಆದ್ದರಿಂದ ಚುನಾವಣಾ ಕಣದಲ್ಲಿರುವ ನನಗೆ ಈ ರೀತಿ ಸುಳ್ಳು ಸುದ್ಧಿ ಹಬ್ಬಿಸಿರುವುದರಿಂದ ಮತದಾರರು ಗೊಂದಲಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಸುಳ್ಳು ಸುದ್ಧಿ ಬಿತ್ತರಿಸಿದವರನ್ನು ಪತ್ತೆ ಮಾಡಿ ತಕ್ಷಣದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.