ಉಡುಪಿ: ಪೋಕ್ಸೋ ಕಾಯಿದೆಯಡಿ ಮಾಧ್ಯಮದಲ್ಲಿ ವರದಿ ಮಾಡುವಾಗ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ. ಪ್ರಕರಣದ ನೊಂದ ಬಾಲಕ ಅಥವಾ ಬಾಲಕಿಯರ ಹೆಸರು, ವಿಳಾಸ ಸಹಿತ ಗುರುತನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ. ಆ ರೀತಿಯ ತಪ್ಪು ಮಾಡಿದರೆ ಮಾಧ್ಯಮದವರ ಮೇಲೂ ಪ್ರಕರಣ ದಾಖಲಿಸಲು ಈ ಕಾಯ್ದೆ ಸೂಚಿಸುತ್ತದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1(ಪೊಕ್ಸೋ) ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ಮಂಗಳವಾರ ಉಡುಪಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾದ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪೋಕ್ಸೊ ಕಾಯಿದೆ 2012ರಲ್ಲಿ ಜಾರಿಗೆ ಬಂದಿದ್ದು, 18ವರ್ಷದ ಕೆಳಗಿನ ನೊಂದ ಮಕ್ಕಳಿಗೆ ಇದರಲ್ಲಿ ವಿಶೇಷ ವಿಸೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶೇಷ ಪೋಲಿಸರು ಅದರಲ್ಲೂ ಮಹಿಳೆಯರು ಇವರನ್ನು ವಿಚಾರಣೆ ಮಾಡಬೇಕು ಮತ್ತು ಮಹಿಳಾ ವೈದ್ಯಾಧಿಕಾರಿಗಳೇ ವೈದ್ಯಕೀಯ ಪರೀಕ್ಷೆ ನಡೆಸ ಬೇಕು. ಯಾವುದೇ ಸಂದರ್ಭದಲ್ಲೂ ಇವರನ್ನು ಸಾರ್ವಜನಿಕ ಸಂಪರ್ಕಕ್ಕೆ ತರಲು ಅವಕಾಶ ಇಲ್ಲ ಎಂದು ಅವರು ಮಾಹಿತಿ ನೀಡಿದರು.
ವಿಶೇಷ ನ್ಯಾಯಾಲಯದಲ್ಲಿ ಪೊಕ್ಸೋ ಪ್ರಕರಣದ ವಿಚಾರಣೆ ಕೂಡ ಬೇರೆ ರೀತಿಯಲ್ಲಿ ಇರುತ್ತದೆ. ಪೋಲಿಸರ ವಿಚಾರಣೆ ಕೂಡ ಬೇರೆ ಇರುತ್ತದೆ. ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾದರೆ ಆ ಬಗ್ಗೆ ವೈದ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ. ಇಂತಹ ದೌರ್ಜನ್ಯಗಳ ಬಗ್ಗೆ ಯಾರಿಗೂ ಮಾಹಿತಿ ಇರುತ್ತದೆಯೋ ಅವರು ಸಂಬಂಧಪಟ್ಟವರಿಗೆ ತಿಳಿಸ ಬೇಕು. ಇಲ್ಲದಿದ್ದರೆ ಅವರು ಕೂಡ ಅಪರಾಧಿಗಳಾಗುತ್ತಾರೆ ಎಂದರು.
ಪೋಕ್ಸೊ ಪ್ರರರಣಗಳಲ್ಲಿ ನೊಂದ ಬಾಲಕ ಬಾಲಕಿಯರ ವಿಚಾರಣೆಯನ್ನು 30 ದಿನಗಳೊಳಗೆ ಮುಗಿಸಬೇಕು ಮತ್ತು ಒಂದು ವರ್ಷದೊಳಗೆ ಇಡೀ ಪ್ರಕರಣದ ಪೂರ್ಣ ವಿಚಾರಣೆಯನ್ನು ನಡೆಸಬೇಕಾಗುತ್ತದೆ. ಗ್ರಾಮೀಣ ಪ್ರದೇಶ ಗಳಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದರಿಂದ ಮಾಧ್ಯಮಗಳು ಈ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಸಂವಿಧಾನ ಜಾರಿಗೆ ಬಂದು ಹಲವು ದಶಕಗಳಾದರೂ ಮೂಲಭೂತ ಹಕ್ಕು ಹಾಗೂ ಸೌಲಭ್ಯಗಳು ಜನರಿಗೆ ಇನ್ನೂ ತಲುಪಿಲ್ಲ. ಕಾನೂನಿನಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದರೂ ಅವರ ಮೇಲೆ ನಿರಂತರವಾಗಿ ದೌರ್ಜನ್ಯ ಗಳು ನಡೆಯುತ್ತಿರುವುದು ದುರಂತ. ಕಾನೂನಿನ ತಿಳುವಳಿಕೆ ಕಡಿಮೆ ಇರುವುದ ರಿಂದ ಪೋಕ್ಸೊ ಪ್ರಕರಣಗಳಂತಹ ಪ್ರಕರಣಗಳು ಜಾಸ್ತಿಯಾಗಿ ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಶರ್ಮಿಳಾ ಎಸ್. ಮಾತನಾಡಿ, ಪೋಕ್ಸೊ ಪ್ರಕರಣಕ್ಕೆ ಮೂಲ ಕಾರಣ ಮೊಬೈಲ್ ಬಳಕೆ. ಮಕ್ಕಳು ಮೊಬೈಲ್ ಜಾಸ್ತಿ ಬಳಸುತ್ತಿದ್ದರೆ ಅವರ ಮೇಲೆ ಗಮನ ಹರಿಸಬೇಕಾಗಿರುವುದು ಪೋಷಕರ ಜವಾಬ್ದಾರಿಯಾಗಿದೆ. ಮೊಬೈಲ್‌ನಲ್ಲಿ ಚಾಟಿಂಗ್ ಮೂಲಕ ಆರಂಭವಾದ ಗೆಳೆತನ ಲೈಂಗಿಕ ದೌರ್ಜನ್ಯದಲ್ಲಿ ಅಂತಿಮವಾಗುತ್ತದೆ ಎಂದು ಹೇಳಿದರು.
ಪೋಕ್ಸೋ ಪ್ರಕರಣಗಳ ದುರುಪಯೋಗ ಕೂಡ ನಡೆಯುತ್ತಿದೆ. ಆ ರೀತಿ ದುರುಪಯೋಗ ಮಾಡುವುದು ಕೂಡ ಅಪರಾಧವಾಗುತ್ತದೆ. ಮಾಧ್ಯಮ ಸಮಾಜ ಕನ್ನಡಿಯಾಗಿದ್ದು, ಅವುಗಳು ಈ ಎಲ್ಲ ವಿಚಾರಗಳನ್ನು ತಮ್ಮ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯ ಮಾಡಬೇಕು. ಪ್ರಕರಣದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ವರದಿ ಮಾಡಬೇಕು ಎಂದು ಅವರು ತಿಳಿಸಿದರು.
ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಿಚಾರ ಮಂಡಿಸಿ , 2012ರಲ್ಲಿ ಅನುಷ್ಠಾನಕ್ಕೆ ಬಂದ ಪೋಕ್ಸೋ ಕಾಯಿದೆಯಡಿ 20ವರ್ಷಗಳ ವರೆಗೂ ಶಿಕ್ಷೆ ವಿಧಿಸಬಹುದಾಗಿದೆ. 2019ರಲ್ಲಿ ಆಗಿರುವ ತಿದ್ದುಪಡಿಯಿಂದ ಈ ಪ್ರಕರಣದಲ್ಲಿ ಮರಣ ದಂಡನೆ ಕೂಡ ವಿಧಿಸಬಹುದಾಗಿದೆ. ಈ ಕಾಯಿದೆಯ ಕಲಂ 23ರನ್ನು ವಿಶೇಷವಾಗಿ ಮಾಧ್ಯಮಕ್ಕಾಗಿಯೇ ರೂಪಿಸ ಲಾಗಿದೆ. ಈ ಪ್ರಕರಣದ ಸುದ್ದಿ ಮಾಡುವಾಗ ಸಂತ್ರಸ್ತೆಯರ ಹೆಸರು, ವಿಳಾಸದಲ್ಲಿ ಗೌಪ್ಯತೆ ಕಾಪಾಡಬೇಕಾಗುತ್ತದೆ ಎಂದು ತಿಳಿಸಿದರು.
ಮಾಧ್ಯಮಗಳಿಗೂ ಈ ಪ್ರಕರಣಗಳ ಬಗ್ಗೆ ಸುದ್ದಿ ಮಾಡಿ ಸಮಾಜಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಆಗ ಅವರು ಸಂತ್ರಸ್ತೆಯ ಊರು, ವಿಳಾಸ ತಿಳಿಸುವ ಬದಲು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಎಂಬುದಾಗಿ ಉಲ್ಲೇಖಿಸಬಹುದು. ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಸಂತ್ರಸ್ತೆಯರ ಆಸಕ್ತಿಯಲ್ಲಿ ಹೆಸರನ್ನು ಪ್ರಕಟಿಸಬೇಕಾದರೆ ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಕೊಳ್ಳಬೇಕು ಎಂದು ಅವರು ಹೇಳಿದರು.
ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯರ ಹೆಸರು ಉಲ್ಲೇಖ ಮಾಡಿದ್ದಲ್ಲಿ ವರದಿ ಮಾಡಿದ ವರದಿಗಾರ ಮಾತ್ರವಲ್ಲ ಸುದ್ದಿ ವಾಚಕರು, ಸಂಪಾದಕರು ಹಾಗೂ ಮಾಲಕರು ಇದಕ್ಕೆ ಬಾದ್ಯರಾಗುತ್ತಾರೆ. ಅವರ ಮೇಲೂ ಪ್ರಕರಣಗಳು ದಾಖ ಲಾಗುತ್ತವೆ ಎಂದ ಅವರು, ಈ ಕಾಯಿದೆಯಡಿ ಸುಳ್ಳು ಸುಳ್ಳು ದೂರು ನೀಡುವುದು ಕೂಡ ಅಪರಾಧವಾಗಿರುತ್ತದೆ. ಆ ಬಗ್ಗೆ ಸಮಾಜಕ್ಕೆ ತಿಳಿಸುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ. ಇದರ ಈ ಕಾಯಿದೆಯ ದುರುಯೋಗ ತಡೆಯ ಬಹುದಾಗಿದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಕಾರ್ಯದರ್ಶಿ ರಾಜೇಶ್ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು