ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬಗ್ಗೆ ದೂರು ಬಂದ 24 ಗಂಟೆಯೊಳಗೆ ಸಮಸ್ಯೆಯನ್ನು ಬಗೆಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೈಂದೂರಿನಲ್ಲಿ ಉಪ್ಪುನೀರಿನ ಸಮಸ್ಯೆಯಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಹೀಗಾಗಿ ಅಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬ್ರಹ್ಮಾವರ ತಾಲೂಕಿನ ಕಳ್ತೂರು, ಕರ್ಜೆ ಹಾಗೂ ಕೊಕ್ಕರ್ಣ ಗ್ರಾಪಂನ ಕೆಲವು ಗ್ರಾಮಗಳಲ್ಲಿ ಸಮಸ್ಯೆ ಎದುರಾಗಿದೆ. ಅದೇ ರೀತಿ ಹೆಬ್ರಿ ತಾಲೂಕಿನ ಬೆಳ್ವೆ ಮತ್ತು ಮುದ್ರಾಡಿಗಳಲ್ಲೂ ಕುಡಿಯುವ ನೀರಿಗೆ ಸಮಸ್ಯೆಯುಂಟಾಗಿದೆ. ಇಲ್ಲೆಲ್ಲ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಇದನ್ನು ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಕುಡಿಯುವ ನೀರಿಗೆ ಸದ್ಯ ಸಮಸ್ಯೆ ಉಂಟಾಗಿಲ್ಲ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮುಂದಿನ ವಾರದಿಂದ ನೀರಿನ ರೇಷನಿಂಗ್ ಪ್ರಾರಂಭಿಸುವ ಚಿಂತನೆ ನಡೆದಿದೆ. ಈ ನಡುವೆ ಮುಂದಿನ 10 ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಈ ಮಳೆ ಬಂದರೆ ನೀರಿಗೆ ಸಮಸ್ಯೆ ಉಂಟಾಗದು ಎಂಬ ಆಶಾವಾದ ಹೊಂದಿದ್ದೇವೆ ಎಂದರು.
ಈ ನಡುವೆ ಸಮುದ್ರ ಪ್ರಕ್ಷುಬ್ಧಗೊಳ್ಳುವ ಬಗ್ಗೆ ಹಾಗೂ ದೊಡ್ಡ ದೊಡ್ಡ ಅಲೆಗಳು ದಡವನ್ನು ಅಪ್ಪಳಿಸುವ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದ್ದು, ಹೆಚ್ಚಿನ ಮಾಹಿತಿ ಬಂದಿಲ್ಲ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಕಡಲ ಕಿನಾರೆಯಲ್ಲಿ ಯಾರೂ ನೀರಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಹಾಗೆಯೇ ಗುಡುಗು ಸಿಡಿಲು ಬರುವಂತ ಸಂದರ್ಭದಲ್ಲಿ ಜನರು ಆದಷ್ಟು ಮನೆಯೊಳಗೆ ಅಥವಾ ಕಟ್ಟದ ಒಳಗೆ ಇರಬೇಕು. ಮೊಬೈಲ್, ಕಬ್ಬಿಣದ ವಸ್ತುಗಳನ್ನು ಹಿಡಿದುಕೊಂಡು ಹೊರಗಡೆ ಹೋಗಬಾರದು. ಈ ಬಗ್ಗೆ ಜನರು ಹೆಚ್ಚು ಮುಂಜಾಗೃತೆ ವಹಿಸುವುದು ಅಗತ್ಯ ಎಂದರು.