ಉಡುಪಿ: ರಂಗಭೂಮಿ ಉಡುಪಿ ಇದರ ಆಶ್ರಯದಲ್ಲಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಇದೇ ಮಾ.27ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿರುವ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಮಾಧವಿ ಎಸ್. ಭಂಡಾರಿ ಅವರನ್ನು ಸನ್ಮಾನಿಸಲಾಗುವುದು ಎಂದು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಂಗಭೂಮಿ ಸಂಸ್ಥೆಯು ಪ್ರತಿ ವರ್ಷದಂತೆ ಈ ಬಾರಿ ಕೂಡ ಹೊಸ ನಾಟಕವನ್ನು ರಂಗಕ್ಕೆ ಪರಿಚಯಿಸುತ್ತಿದೆ. ಹೆಸರಾಂತ ನಿರ್ದೇಶಕ ಗಣೇಶ್ ಮಂದಾರ್ತಿ ಅವರ ನಿರ್ದೇಶನದಲ್ಲಿ ‘ಸೀತಾರಾಮ ಚರಿತಾ’ ಎಂಬ ನೂತನ ನಾಟಕವು ರಂಗಭೂಮಿ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ ಎಂದರು.
ರಂಗಭೂಮಿ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಮಾತನಾಡಿದ ಅವರು, ಅಂದು ಸಂಜೆ 6ಗಂಟೆಗೆ ಮಾಹೆಯ ಉಪಕುಲಾಧಿಪತಿ ಎಚ್.ಎಸ್. ಬಲ್ಲಾಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಂಗಭೂಮಿ ಸಂಸ್ಥೆಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅದಿತಿ ಬಿಲ್ಡರ್ಸ್ ನ ರಂಜನ್, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೋ. ಲಕ್ಷ್ಮೀನಾರಾಯಣ ಕಾರಂತ, ಕಡಿಯಾಳಿ ಕಮಲಾ ಬಾಯಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುದರ್ಶನ್ ನಾಯಕ್, ಕಟಪಾಡಿಯ ರಂಜನ್ ಕಲಾವಿದರು ಸಂಸ್ಥೆಯ ಸಂಚಾಲಕ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.