ಉಡುಪಿ: ಎಲ್‌ಪಿಜಿ ಬಳಕೆದಾರರಿಗೆ ಸರಕಾರದಿಂದ ಯಾವುದೇ ಸಬ್ಸಿಡಿಗಳು ಸದ್ಯಕ್ಕೆ ಇಲ್ಲದಿದ್ದರೂ ಮುಂದೆ ಸಿಗಲಿರುವ ಯೋಜನೆಗಳು ಸಿಗಬೇಕಿದ್ದರೆ ಇಕೆವೈಸಿ ಮಾಡುವುದು ಅತ್ಯಗತ್ಯವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಶೇ.75ರಷ್ಟು ಮಂದಿ ಎಲ್‌ಪಿಜಿ ಬಳಕೆದಾರರೆಲ್ಲರು ಇಕೆವೈಸಿ ಮಾಡಿದ್ದು, ಇನ್ನುಳಿದಿರುವ ಬಳಕೆದಾರರೆಲ್ಲರು ಮಾ.31ರೊಳಗೆ ತಮ್ಮ ಏಜೆನ್ಸಿಗೆ ತೆರಳಿ ಇಕೆವೈಸಿಗೆ ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ.
ಯಾರ ಹೆಸರಿನಲ್ಲಿ ಸಂಪರ್ಕ ಇದೆಯೋ ಅವರದ್ದೇ ಬೆರಳಚ್ಚು ನೀಡಬೇಕಾಗುತ್ತದೆ. ಆಧಾರ್ ಹಾಗೂ ಗ್ಯಾಸ್ ಪಾಸ್ ಬುಕ್ ತೆಗೆದುಕೊಂಡು ಹೋಗಿ ಲಿಂಕ್ ಮಾಡಿಸಬೇಕು. ಈ ಸಂದರ್ಭದಲ್ಲಿ ಹೆಸರು ಬದಲಾವಣೆಗಳಿದ್ದರೆ ಅವರ ಸಮ್ಮುಖದಲ್ಲೇ ಮಾಡಬಹುದು. ನೋಂದಣಿ ಮಾಡಿಸಿಕೊಂಡ ವ್ಯಕ್ತಿ ಮೃತಪಟ್ಟಿದ್ದೇ ಆದಲ್ಲಿ ಅವರ ಮರಣ ಪ್ರಮಾಣ ಪತ್ರ ನೀಡಬೇಕು.
ಇಕೆವೈಸಿ ಮಾಡಿಕೊಂಡರೆ ಉತ್ತಮ:
ಇಕೆವೈಸಿಯನ್ನು ಉಜ್ವಲ್ ಯೋಜನೆಯಡಿ ನೋಂದಣಿ ಮಾಡಬೇಕು ಅಥವಾ ಎಲ್ಲರೂ ಮಾಡಿಸಬೇಕೆ ಎಂಬ ಗೊಂದಲಗಳಿದ್ದವು. ಇಂತಹ ಯಾವುದೇ ಇತಿಮಿತಿಗಳಿಲ್ಲ, ಸಂಪರ್ಕ ಹೊಂದಿರುವವರು ತಮ್ಮ ಏಜೆನ್ಸಿಗಳಿಗೆ ತೆರಳಿ ಆದಷ್ಟು ಬೇಗನೇ ಮಾಡಿಸಿಕೊಂಡರೆ ಉತ್ತಮ ಎನ್ನುತ್ತಾರೆ ಬಾಲಾಜಿ ಗ್ಯಾಸ್ ಏಜೆನ್ಸಿಯ ವಿಷ್ಣು ಆಚಾರ್ಯ.