ಚಿಕ್ಕಮಗಳೂರು: ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನಿಜವಾದ ಬಿಜೆಪಿ ಕಾರ್ಯಕರ್ತರು ಈ ರೀತಿ ಮಾಡುತ್ತಿಲ್ಲ. ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದವರು ಈ ರೀತಿ ಮಾಡಿಸಿರಬಹುದು. ಅವರು ಹಿಂದಿದ್ದ ಪಕ್ಷದಲ್ಲಿ ಇಂತಹ ಚಾಳಿಯನ್ನು ನಡೆಸಿದ್ದಾರೆ. ಇಲ್ಲೂ ನಡೆಸಿದ್ದಾರೆ. ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳುವುದಿಲ್ಲ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪರೋಕ್ಷವಾಗಿ ಪ್ರಮೋದ್ ಮಧ್ವರಾಜ್ ವಿರುದ್ಧ ಕಿಡಿಕಾರಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷವೇ ಆಗಲಿ ವಿರೋಧ ಪಕ್ಷವೇ ಆಗಲಿ ಅಭಿವೃದ್ಧಿ ಆಧಾರದಲ್ಲಿ ಚರ್ಚೆಗೆ ಸಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಅವಕಾಶವಿದೆ. ಆದರೆ, ಇನ್ನೊಬ್ಬರ ತೇಜೋವಧೆ ಮಾಡುವ ಕೆಲಸ ಮಾಡಬಾರದು. ನಾವು ನಮ್ಮ ವಿರುದ್ದ ನಿಲ್ಲುವ ಅಭ್ಯರ್ಥಿಯನ್ನು ಅಲ್ಲಗಳೆಯುವುದಿಲ್ಲ. ಅಭಿವೃದ್ಧಿ ಆಧಾರದ ಮೇಲೆ ಮತದಾರರ ಬಳಿ ತೆರಳುತ್ತೇವೆ ಎಂದು ತಮ್ಮ ವಿರುದ್ಧದ ಗೋಬ್ಯಾಕ್ ಶೋಭಾ ಅಭಿಯಾನಕ್ಕೆ ತಿರುಗೇಟು ನೀಡಿದರು.
ಚಿಕ್ಕಮಗಳೂರು – ಉಡುಪಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆಂಬ ಮಾಹಿತಿ ನನಗೂ ಇದೆ. ನಾನು ಇದುವರೆಯೂ ಯಾವ ಗುತ್ತಿಗೆದಾರನಿಂದ ಒಂದು ರೂ. ಪಡೆದಿಲ್ಲ. ಅವರ ಮುಖವನ್ನು ಕೂಡ ನೋಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.