ಉಡುಪಿ: ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನೇಕಾರರ ಸೇವಾ ಕೇಂದ್ರ ಬೆಂಗಳೂರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಬಾರ್ಡ್, ರೋಬೋಸಾಫ್ಟ್ (ಸಿಎಸ್ ಆರ್ ನಿಧಿ) ಇವರ ಸಹಕಾರದೊಂದಿಗೆ ನೂತನ ಬೃಹತ್ ಕೈಮಗ್ಗ ನೇಯ್ಗೆ ಕೇಂದ್ರ ಆ್ಯಂಡ್ ಮಹಿಳೆಯರಿಗಾಗಿ 6 ತಿಂಗಳ ಕೈಮಗ್ಗ ನೇಯ್ಗೆ ತರಬೇತಿಯ ಉದ್ಘಾಟನೆ ಇದೇ ಫೆ.24ರಂದು ಬೆಳಿಗ್ಗೆ 10.30ಕ್ಕೆ ಉಡುಪಿಯ ಬನ್ನಂಜೆ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ನಡೆಯಲಿದೆ ಎಂದು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಹೇಳಿದರು.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೇಕಾರರು ನೇಯುವ ಕೈಮಗದ ಉತ್ಪನ್ನ ಉಡುಪಿ ಸೀರೆಗಳೆಂದು ಜನಪ್ರಿಯವಾಗಿ ದೇಶ ವಿದೇಶಗಳಲ್ಲೂ ಬಹಳ ಬೇಡಿಕೆಯನ್ನು ಹೊಂದಿದೆ. ಉಡುಪಿ ಸೀರೆಗಳು ಹತ್ತಿಯ ನೂಲುಗಳಿಂದ ತಯಾರಿಸಲ್ಪಟ್ಟು, ಬಹಳ ಹಗುರವಾಗಿ ಉಡಿದು. ಆಹ್ಲಾದಕರ ಅನುಭವ ನೀಡುತ್ತವೆ. ಬೇಸಿಗೆ, ಮಳೆ, ಚಳಿ ಯಾವ ಕಾಲಕ್ಕೂ ಕೂಡ ಉಡಲು ಯೋಗ್ಯವಾಗಿರುವುದು ಇದರ ಹೆಚ್ಚುಗಾರಿಕೆ. ಇವು ಬಹಳ ಬಾಳಿಕೆ ಬರುತ್ತವೆ. ಗಂಜಿ ಹಾಕಿ ಬಳಸಿದಾಗ ಈ ಸೀರೆಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಆಕರ್ಷಕ ವಿನ್ಯಾಸಗಳ ಹಾಕಿ ಉತ್ಪಾದನೆ ಆರಂಭಿಸಿದರೆ ಉಡುಪಿ ಸೀರೆಗಳು ವಿಶೇಷ ಸಭೆ ಸಮಾರಂಭಗಳಲ್ಲಿ ಕೂಡ ಉಡಲು ಯೋಗ್ಯವೆನಿಸುತ್ತವೆ. ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ (Gl Tag) ನ್ನು ಉಡುಪಿ ಸೀರೆ 2018ರಲ್ಲಿ ಪಡೆದುಕೊಂಡಿರುವುದು ಉಡುಪಿ ಜಿಲ್ಲೆಯ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಇಂದಿನ ಮಾರುಕಟ್ಟೆಯಲ್ಲಿ ಉಡುಪಿ ಸೀರೆಗಳಿಗೆ ಬಹಳ ಬೇಡಿಕೆ ಇದೆ ಎಂದರು.
ಉಡುಪಿಯಲ್ಲಿ ಕೈಮಗ್ಗದ ನೇಯ್ಗೆ ಶತಮಾನಗಳಿಂದ ಒಂದು ಅಪೂರ್ವ ಕಲಾ ಕೌಶಲ್ಯವಾಗಿ ಜನಜನಿತವಾಗಿತ್ತು. ಒಂದೆರಡು ದಶಕಗಳ ಹಿಂದಿನವರೆಗೂ ಜಿಲ್ಲೆಯಲ್ಲಿ ಸಾವಿರಾರು ನೇಕಾರರು ಈ ಉದ್ಯಮವನ್ನು ಅವಲಂಬಿಸಿಕೊಂಡಿದ್ದರು. ಆದರೆ, ನೇಕಾರಿಕೆಯ ಬಗ್ಗೆ ಯುವ ಜನರಲ್ಲಿ ಹೆಚ್ಚಿದ ಕೀಳರಿಮೆ, ಹೆಚ್ಚು ಶ್ರಮ, ಕಡಿಮೆ ಆದಾಯ ಮತ್ತು ಸ್ಪರ್ಧಾತ್ಮಕ ಜಗತ್ತಿನ ಹೊಡೆತಗಳಿಂದ ಈ ಭಾಗದ ನೇಯ್ಗೆ ಉದ್ಯಮವು ನಲುಗಿ ಹೋಗಿ, ಅವಸಾನದತ್ತ ಬಂದು ನಿಂತಿತು. ಇಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಟ್ಟು ಕೇವಲ 50 ವೃತ್ತಿನಿರತ ನೇಕಾರರಿದ್ದಾರೆ. ಇವರಲ್ಲಿ ಹೆಚ್ಚಿನವರು ವೃತ್ತಿಜೀವನದ ಸಂಧ್ಯಾ ಕಾಲದಲ್ಲಿದ್ದಾರೆ. ಯುವ ಪೀಳಿಗೆಗೆ ಕೈಮಗ್ಗದ ನೇಯ್ಗೆ ತರಬೇತಿ ನೀಡಿ ಪರಿಣತ ನೇಕಾರರನ್ನಾಗಿ ಮಾಡಿ, ಅವರಿಗೆ ಒಳ್ಳೆಯ ವೇತನ ನೀಡಿ ಬೆಳೆಸಿದರೆ ಮಾತ್ರ ಈ ಶ್ರೀಮಂತ ಕರಕುಶಲ ಕಲೆ ಉಳಿಯಲಿದೆ ಹಾಗೂ ಉಡುಪಿ ಸೀರೆಯ ವೈಶಿಷ್ಟ್ಯತೆ ಮತ್ತು ಮಾನ್ಯತೆಯನ್ನು ಉಳಿಸಿ ಬೆಳೆಸುವುದು ಸಾಧ್ಯ.
ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿಯಲ್ಲಿ ನೂರು ಹೊಸ ನೇಕಾರರನ್ನು ಈ ಉದ್ಯಮಕ್ಕೆ ಕರೆತರುವ ಸಂಕಲ್ಪ ಮಾಡಿದ್ದು, ಈಗಾಗಲೇ ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ 25 ಯುವತಿಯರಿಗೆ ಶಿಷ್ಯ ವೇತನ, ಊಟ, ಉಪಹಾರ ಮತ್ತು ಪ್ರಯಾಣ ಭತ್ಯೆಯನ್ನು ಭರಿಸಿ ಆರಂಭಿಸಿದ ಮೊದಲ ಹಂತದ ತರಬೇತಿ ಕಾರ್ಯಾಗಾರ ಮುಗಿದಿದೆ. 22 ಹೊಸ ನೇಕಾರರು ಈಗಾಗಲೇ ವೃತ್ತಿಪರ ನೇಕಾರರಾಗಿ ನೇಯ್ಕೆ, ಕಾಯಕವನ್ನು ಆರಂಭಿಸಿದ್ದಾರೆ. ಇದೀಗ 30 ಹೊಸಶಿಬಿರಾರ್ಥಿಗಳಿಗಾಗಿ 2ನೇ ಹಂತದ 6 ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಜಾಗವನ್ನು ಪಡೆದು, 50 ಕೈಮಗ್ಗಗಳನ್ನು ಅಳವಡಿಸಿ ಉತ್ಪಾದನೆ ಮತ್ತು ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಮಂಜುನಾಥ್ ಮಣಿಪಾಲ್, ಪ್ರೇಮಾನಂದ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಿಇಒ ದಿನೇಶ್ ಉಪಸ್ಥಿತರಿದ್ದರು.