ಉಡುಪಿ: ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ಚಿನ್ನದ ಅಂಗಡಿಯೊಂದರಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ಮೂರು ಮಕ್ಕಳನ್ನು ಅಧಿಕಾರಿಗಳು ರಕ್ಷಣೆ ಮಾಡಿ ಪುನರ್ ವಸತಿ ಕಲ್ಪಿಸಿದ್ದಾರೆ.
ಸಾರ್ವಜನಿಕ ದೂರಿನ ಮೇರೆಗೆ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಹಿಳಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ನಾಗರಿಕ ಸಮಿತಿ ಜಂಟಿ ಕಾರ್ಯಾಚರಣೆ ನಡೆಸಿ, ಚಿನ್ನದ ಅಂಗಡಿಯಲ್ಲಿ ಅಪಾಯಕಾರಿ ಉದ್ದಿಮೆಯಾದ ಚಿನ್ನಕ್ಕೆ ಹೊಳಪು ನೀಡುವ ಕೆಲಸದಲ್ಲಿ ನಿರತರಾಗಿದ್ದ 2 ಬಾಲಕಾರ್ಮಿಕ ಮತ್ತು 1 ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಬಾಲಕರ ಬಾಲ ಮಂದಿರದಲ್ಲಿ ಪುನರ್ ವಸತಿ ಕಲ್ಪಿಸಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮ್ರತಾ , ಕಾರ್ಮಿಕ ನಿರೀಕ್ಷಕ ಸಂಜಯ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಹೇಶ ಹಾಗೂ ಯೋಗೀಶ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಜ್ಯೋತಿ ಹಾಗೂ ಪ್ರಕಾಶ್, ನಗರ ಠಾಣಾ ಪೊಲೀಸರು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.