ಉಡುಪಿ: ಕಲ್ಮಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರು, ಸಾಮಾಜಿಕ ಮುಂದಾಳು, ಉದ್ಯಮಿ ಪ್ರಕಾಶ್ ಶೆಟ್ಟಿ ಕಲ್ಕಂಜೆ ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು.
ಮೃತರು ದೆಂದೂರುಕಟ್ಟೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಗಡುವಾಡು ಶ್ರೀಧೂಮಾವತಿ ದೈವಸ್ಥಾನ ನೇಮೋತ್ಸವ ಸಮಿತಿಯ ಅಧ್ಯಕ್ಷರಾಗಿ, ಮಣಿಪುರ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ಮಣಿಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಗುತ್ತಿಗೆದಾರರಾಗಿ, ಕೆಮ್ತೂರಿನ ಕ್ರಶರ್ ಉದ್ಯಮವನ್ನು ನಡೆಸುತ್ತಿದ್ದರು. ಇವರು ರಂಗಭೂಮಿಯಲ್ಲಿಯೂ ತನ್ನ ಛಾಪು ಮೂಡಿಸಿದ್ದು, 80ರ ದಶಕದಲ್ಲಿ ಹಲವು ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ, ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಶೆಟ್ಟಿ ಅವರು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಸೋದರ ಮಾವನಾಗಿದ್ದು, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.