ಉಡುಪಿ: ವಾರದಲ್ಲಿ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕನ್ನಡ ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ ಎಂದರು.
ಕೊಂಕಣಿ, ಬ್ಯಾರಿ, ಯಕ್ಷಗಾನ, ತುಳು ಅಕಾಡೆಮಿಗಳಿಗೂ ಇಲ್ಲಿಗೂ ಸಂಬಂಧ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ ಪರಭಾವಗೊಂಡ ಪಕ್ಷದ ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರ ಸಲಹೆ ಪಡೆದು ಅಧ್ಯಕ್ಷರ ನೇಮಕ ಮಾಡಲಾಗುವುದು. ಕಾಂಗ್ರೆಸ್ ಕಟ್ಟಾಳು, ಪಕ್ಷದ
ಬಾವುಟ ಹಿಡಿದು ದುಡಿದವರಿಗೆ ಅಕಾಡೆಮಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ಸಚಿವರು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಶಕ್ತಿ ಮೀರಿ ಜಿಲ್ಲೆಯಲ್ಲಿ ಇಲಾಖೆ ವತಿಯಿಂದ ಕೆಲಸ ಮಾಡಲಾಗುವುದು.
ಕಾಂಗ್ರೆಸ್ ಪಕ್ಷದ ಕೊಡುಗೆಯಿಂದ ಹಾಗೂ ಕಾರ್ಯಕರ್ತರ ಆಶೀರ್ವಾದದಿಂದ ನಾನು ಮಂತ್ರಿಯಾಗಿದ್ದೇನೆ. ಜಿಲ್ಲೆಗೂ ನನಗೂ ಅವಿನಾಭಾವ ಸಂಬಂಧ ಇದೆ. ಈ ಹಿಂದೆ ನಾನು ಸಣ್ಣ ನೀರಾವರಿ ಸಚಿವನಾಗಿದ್ದ ವೇಳೆ ಜಿಲ್ಲೆಗೆ ಭೇಟಿ ನೀಡಿದ್ದೆ ಎಂದು ಸಚಿವರು ನೆನಪು ಮಾಡಿಕೊಂಡರು.
ಈ ಭಾಗದ ಸಂಸದರೊಬ್ಬರು ನಮ್ಮ ಮುಖ್ಯಮಂತ್ರಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ನಾನು ಖಂಡಿಸಿದ್ದೆ. ಆ ವೇಳೆ ತಮ್ಮ ಜಿಲ್ಲೆಗೆ ಬಂದು ಮಾತನಾಡಲು
ಯಾವುದೇ ಅಂಜಿಕೆ ಇಲ್ಲ ಎಂದಿದ್ದೆ. ಇದೀಗ ನಿಮ್ಮ ಜಿಲ್ಲೆಗೆ ಬಂದು ಮಾತನಾಡುತ್ತಿದ್ದೇನೆ ಎಂದು ಸಚಿವರು ಸಂಸದ ಅನಂತಕುಮಾರ್ ಹೆಗಡೆ ಅವರ ಹೆಸರು ಹೇಳದೇ ಛೇಡಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ತುಳು ಭಾಷೆಗೆ ಎರಡನೇ ಭಾಷೆಯ ಮಹತ್ವ ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಸರ್ಕಾರದ ನಿಲುವು ಹಾಗೂ ವಿರೋಧ ಪಕ್ಷದ ಟೀಕೆಗೆ ಗಟ್ಟಿ ಧ್ವನಿಯಲ್ಲಿ ನಿರಂತರವಾಗಿ ಪ್ರತಿಪಾದನೆ ಮಾಡುತ್ತಿರುವ ಏಕೈಕ ವ್ಯಕ್ತಿ ಶಿವರಾಜ್ ತಂಗಡಗಿ ಅವರು ಎಂದು ಸಚಿವರನ್ನು ಶ್ಲಾಘಿಸಿದರು.
ಸಾಂಸ್ಕೃತಿಕವಾಗಿ ಹಾಗೂ ಕಲಾತ್ಮಕವಾಗಿ ದೊಡ್ಡ ಕೊಡುಗೆ ನೀಡಿರುವ ಜಿಲ್ಲೆ ಉಡುಪಿ. ಅಕಾಡೆಮಿಗಳಿಗೆ ನೇಮಕ ಮಾಡುವಾಗ ಪಕ್ಷದ ಸ್ಥಳೀಯ ನಾಯಕರನ್ನು ಪರಿಗಣಿಸಿ ನೇಮಕ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಕ್ಷದ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಎಂ.ಎ.ಗಫೂರ್, ರಮೇಶ್ ಕಾಂಚನ್, ಕಿಶನ್ ಹೆಗ್ಡೆ, ದಿನಕರ ಹೇರೂರು, ಗೀತಾ ವಾಗ್ಲೆ, ಸದಾಶಿವ ದೇವಾಡಿಗ, ತಿಮ್ಮ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.