ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು. ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ ಕನಸು ನನಸಾಗಿದೆ.
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಗೊಂಡಿದೆ.
ವಿಶೇಷ ಹೆಲಿಕಾಪ್ಟರ್‌ನಲ್ಲಿ ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿಯ ಛತ್ರಿವನ್ನು ಹಿಡಿದುಕೊಂಡು ರಾಮಮಂದಿರ ಪ್ರವೇಶಿಸಿದರು. ಇದಾದ ಬಳಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು, ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯ ನೆರವೇರಿಸಿದರು.
ಪ್ರಧಾನಿ ನರೇಂದ್ರ ಮೋದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್‌ದಾಸ್ ಅವರು ಸಾಥ್ ನೀಡಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠೆ ನೆರವೇರಿಸಿದರು.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಗಣ್ಯರು
ಬಾಲಿವುಡ್ ನಟರಾಜ್ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಆಯುಷ್ಮಾನ್ ಖುರಾನ, ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮುಕೇಶ್ ಅಂಬಾನಿ ಕುಟುಂಬಸ್ಥರು, ಗಾಯಕರಾದ ಸೋನು ನಿಗಮ್, ತೆಲುಗು ನಟ ಚಿರಂಜೀವಿ, ಅವರ ಪುತ್ರ ರಾಮ್ ಚರಣ್ ತೇಜ್ ಸೇರಿ ಸುಮಾರು 7 ಸಾವಿರಕ್ಕೂ ಅಧಿಕ ಗಣ್ಯರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು.