ಉಡುಪಿ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘವು ಸಮಾಜಕ್ಕೆ ಆರೋಗ್ಯಕರ ಹಾಗೂ ಪ್ರಾಮಾಣಿಕ ಕೊಡುಗೆಯನ್ನು ನೀಡುತ್ತಿದೆ. ದೇಶ ಮಾತ್ರವಲ್ಲದೆ ವಿದೇಶಗಳಿಗೂ ಕೆ.ಎಂಎಫ್ ನ ಉತ್ಪನ್ನಗಳು ರವಾನೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಯಶ್ ಪಾಲ್ ಎ ಸುವರ್ಣ ಹೇಳಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಉಡುಪಿ ಉಪ್ಪೂರು ಡೈರಿ ಆವರಣದಲ್ಲಿ ಭಾನುವಾರ ನಡೆದ ಉಡುಪಿ ಡೈರಿ ಆಡಳಿತ ಕಚೇರಿ ಶಂಕುಸ್ಥಾಪನೆ ಹಾಗೂ ನೂತನ ಉಪಾಹಾರ ಗೃಹದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಹಾಲಿನ ಭೂತ್ ಗಳನ್ನು ತೆರೆಯುವ ಮೂಲಕ ಬಹಳಷ್ಟು ಜನರಿಗೆ ಉದ್ಯೋಗವನ್ನು ನೀಡುವುದರ ಮೂಲಕ ಹಲವು ಕುಟುಂಬಗಳಿಗೆ ಕೆ.ಎಂಎಫ್ ವರದಾನವಾಗಿದೆ. ರಾಜ್ಯದ 15 ಒಕ್ಕೂಟಗಳಲ್ಲಿ ಮಂಗಳೂರಿನ ಕೆ.ಎಂಎಫ್ ಗೆ 4 ನೇ ಸ್ಥಾನದಲ್ಲಿದೆ. ಲಾಭದ ಶೇ.15 ರಷ್ಟು ಮಾತ್ರ ಆಡಳಿತ ವೆಚ್ಚಕ್ಕಾಗಿ ಬಳಸಿಕೊಳ್ಳುತ್ತಿದ್ದು , ಶೇ.85 ರಷ್ಟು ಮೊತ್ತವನ್ನು ನೇರವಾಗಿ ಸೊಸೈಟಿ ಹಾಗೂ ಹೈನುಗಾರಿಕೆಗೆ ನೀಡುವ ಮೂಲಕ ರೈತರ ಮೊ ಗದಲ್ಲಿ ನಗುವನ್ನು ಕಾಣುವ ಕಾರ್ಯವನ್ನು ಕೆ.ಎಂ.ಎಫ್ ಮಾಡಿದೆ ಎಂದರು.
ಕಾರ‍್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕೆ.ಎಂಎಫ್ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ ಅಭಿವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಹೈನುಗಾರಿಕೆ ಮುಖ್ಯ ಕಾರಣವಾಗಿದೆ ಎಂದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ ಪ್ರಾಸ್ತಾವಿಕ ನುಡಿಗಳಾನ್ನಾಡಿದರು.
ಮಾಜಿ ಶಾಸಕ ರಘುಪತಿ ಭಟ್, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಕಾರ‍್ಯಕಾರಿ ಮಂಡಳಿ ನಿರ್ದೇಶಕರಾದ ರವಿರಾಜ ಹೆಗ್ಡೆ, ಕಾಪು ದಿವಾಕರ್ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ, ನರಸಿಂಹ ಕಾಮತ್, ಬಿ ಸುಧಾಕರ್ ರೈ, ಸುಧಾಕರ್ ಶೆಟ್ಟಿ, ಸವಿತಾ ಎನ್ ಶೆಟ್ಟಿ, ಸ್ಮಿತಾ ಆರ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಎನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಸ್ವಾಗತಿಸಿದರು, ಸಂಘದ ನಿರ್ದೇಶಕ ರವಿರಾಜ ಹೆಗ್ಡೆ ಕೊಡವೂರು ವಂದಿಸಿದರು, ಸಂಘದ ಉಪ ವ್ಯವಸ್ಥಾಪಕ ಸುಧಾಕರ ಶೆಟ್ಟಿ ನಿರೂಪಿಸಿದರು.