ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ವಿಶ್ವ ಪರ್ಯಾಯ ಮಹೋತ್ಸವಕ್ಕೆ ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿಗಳಿಂದ 104 ವಾಹನಗಳಲ್ಲಿ ಹೊರಕಾಣಿಕೆ ಸಮರ್ಪಿಸಲಾಯಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ನೇತೃತ್ವದಲ್ಲಿ ಬೃಹತ್ ಹೊರೆಕಾಣಿಕೆ ಹರಿದುಬಂತು. ಜೋಡುಕಟ್ಟೆಯಲ್ಲಿ ಡಾ. ಎಂ.ಎನ್. ರಾಜೇಂದ್ರಕುಮಾರ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಜೋಡುಕಟ್ಟೆಯಿಂದ ಹಳೆ ಡಯಾನ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮೂಲಕ ಮುಖ್ಯ ರಸ್ತೆಯಲ್ಲಿ ಆಗಮಿಸಿ ರಥಬೀದಿಯ ಮೂಲಕ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಿರುವ ಉಗ್ರಾಣ ಕೇಂದ್ರಕ್ಕೆ ಸಾಗಿಬಂತು.
ತಟ್ಟಿರಾಯ, ಚೆಂಡೆ ಬಳಗ, ಹಲವು ನೃತ್ಯಗಳು, ಹಲವು ಭಜನಾ ತಂಡಗಳು, ಕೊಂಬು ವಾದ್ಯ ಮೆರವಣಿಗೆಗೆ ಮೆರುಗನ್ನು ನೀಡಿತು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು, ಕಾರ್ಕಳ ತಾಲೂಕು, ಉಡುಪಿ ತಾಲೂಕು, ಕುಂದಾಪುರ ತಾಲೂಕು, ಬ್ರಹ್ಮಾವರ ತಾಲೂಕು, ಕಾಪು ತಾಲೂಕು, ಹೆಬ್ರಿ, ಮಂದಾರ್ತಿ, ಕೋಟ ಹೀಗೆ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಂದ ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು. ತೆಂಗಿನಕಾಯಿ, ಬಾಳೆ ಗೊನೆ, ಸೌತೆಕಾಯಿ, ಕುಂಬಳಕಾಯಿ, ಗೆಣಸು, ಬಾಳೆ ಎಲೆ, ಹೀಗೆ ಎಲ್ಲಾ ವಿವಿಧ ತರಕಾರಿಗಳು ಹೊರೆಕಾಣಿಕೆ ರೂಪದಲ್ಲಿ ಹರಿದುಬಂತು.
ಮಠದ ದಿವಾನರಾದ ನಾಗರಾಜ ಆಚಾರ್ಯ, ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಹೊರಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್, ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ರಂಜನ್ ಕಲ್ಕೂರ್, ಮೋಹನ್ ಶೆಟ್ಟಿ ಮೂಡನಿಡಂಬೂರು, ಕಾಪು ದಿವಾಕರ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಪ್ರಮುಖರಾದ ರಮೇಶ್ ಭಟ್, ಮಂಜುನಾಥ್ ಉಪಾಧ್ಯ, ರವೀಂದ್ರ ಆಚಾರ್ಯ, ವಿಜಯ ರಾಘವ ರಾವ್, ರಾಮಚಂದ್ರ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.