ಬೆಂಗಳೂರು: ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಆದರೆ, ನಾವ್ಯಾರೂ ರಾಮಚಂದ್ರನ ವಿರುದ್ಧವಾಗಿಲ್ಲ. ಬಿಜೆಪಿ ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಶ್ರೀರಾಮಚಂದ್ರನನ್ನು ದೊಡ್ಡ ರಾಜಕೀಯ ವಿಷಯವಾಗಿ ಮಾಡಿಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ ಎಂದರು.
ನಾವೆಲ್ಲರೂ ರಾಮನ ಭಕ್ತರೇ. ಬಿಜೆಪಿ ರಾಜಕೀಯವಾಗಿ ಮಾತನಾಡುತ್ತಿದ್ದು, ಅದಕ್ಕೆ ಔಷಧ ಇಲ್ಲ. ರಾಮನನ್ನು ನಾವೂ ಗೌರವಿಸುತ್ತೇವೆ, ಪೂಜಿಸುತ್ತೇವೆ, ಭಜನೆ ಮಾಡುತ್ತೇವೆ. ರಾಮ ಮಂದಿರವನ್ನೂ ಕಟ್ಟಿದ್ದೇವೆ. ದೇವರ ಹೆಸರಲ್ಲಿ ರಾಜಕೀಯಕ್ಕೆ ವಿರೋಧವಾಗಿದ್ದೇವೆ ಅಷ್ಟೇ ಎಂದರು.