ಹೊಸದಿಲ್ಲಿ: ರಾಜಸ್ಥಾನ ಸಚಿವ ಸುರೇಂದ್ರ ಪಾಲ್ ಸಿಂಗ್ ಟಿಟಿ ಅವರು ಉಪಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ರಾಜಸ್ಥಾನದ ಕರನ್‌ಪುರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಸುರೇಂದ್ರ ಪಾಲ್ ಸಿಂಗ್ ಟಿಟಿ ಅವರು ಕಾಂಗ್ರೆಸ್ ಅಭ್ಯರ್ಥಿ ರೂಪೀಂದರ್ ಸಿಂಗ್ ಕೂನರ್ ಅವರ ಎದುರು 11,283 ಮತಗಳ ಅಂತರದಿಂದ ಪರಾಜಿತಗೊಂಡಿದ್ದಾರೆ.
ಉಪಚುನಾವಣೆಗೆ ಮುನ್ನವೇ ಸಿಂಗ್ ಅವರನ್ನು ರಾಜ್ಯದ ಭಜನ್ ಲಾಲ್ ನೇತೃತ್ವದ ಬಿಜೆಪಿ ಸಂಪುಟದಲ್ಲಿ ಸಚಿವರಾಗಿ ನೇಮಿಸಿತ್ತು. ಅವರ ಸೋಲು ಬಿಜೆಪಿಗೆ ದೊಡ್ಡ ಮುಖಭಂಗವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಹಾಗೂ ಆಗಿನ ಶಾಸಕ ಗುರ್ಮೀತ್ ಸಿಂಗ್ ಕುಮಾರ್ ಅವರು ಪ್ರಚಾರ ಸಮಯದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಇಲ್ಲಿನ ಚುನಾವಣೆಯನ್ನು ಮುಂದೂಡಲಾಗಿತ್ತು. ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಿಗೇ ಕಾಂಗ್ರೆಸ್ ಪಕ್ಷ ಗುರ್ಮೀತ್ ಸಿಂಗ್ ಅವರ ಪುತ್ರ ರೂಪೀಂದರ್ ಸಿಂಗ್ ಅವರನ್ನು ಕಣಕ್ಕಿಳಿಸಿತ್ತು.