ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲದ ಅಂಗಸಂಸ್ಥೆ ತುಶಿಮಾಮ ಕಡಿಯಾಳಿ ನೇತೃತ್ವದಲ್ಲಿ ಪೊಡವಿಗೊಡೆಯ ಶ್ರೀಕೃಷ್ಣನಿಗೆ ವಿಷ್ಣುಸಹಸ್ರನಾಮಾವಳಿ ಪಾರಾಯಣ ಸಹಿತ ‘ಕೋಟಿ ತುಳಸಿ ಅರ್ಚನೆ’ಯನ್ನು ಇದೇ ಬರುವ ಡಿಸೆಂಬರ್ 31ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ತುಶಿಮಾಮ ಕಾರ್ಯಾಧ್ಯಕ್ಷ ಪ್ರದೀಪ್ ಕಲ್ಕೂರ್ ತಿಳಿಸಿದರು.
ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕ ಕಲ್ಯಾಣಾರ್ಥವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ಮೆರವಣಿಗೆಯ ಮೂಲಕ ಶ್ರೀಕೃಷ್ಣ ನ ಮೂರ್ತಿಯನ್ನು ತಂದು ರಾಜಾಂಗಣದ ಅಲಂಕೃತ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗುವುದು. ಬಳಿಕ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಈ ಮಂಗಳಕಾರ್ಯಕ್ಕೆ ಡಿ.30ರೊಳಗೆ ತುಳಸಿಯನ್ನು ಕೃಷ್ಣಮಠಕ್ಕೆ ಒಪ್ಪಿಸಬಹುದು. ಎಲ್ಲಾ ಜಾತಿ ಧರ್ಮದವರೂ ತುಳಸಿ ನೀಡಬಹುದು. ಈ ಕಾರ್ಯಕ್ರಮಗಳಿಗೆ ಎಲ್ಲಾ ವಿಪ್ರ ಬಂಧುಗಳು ಹಾಗೆಯೇ ವಿಪ್ರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತುಶಿಮಾಮ ಕಡಿಯಾಳಿ ಅಧ್ಯಕ್ಷ ರಘುಪತಿ ಉಪಾಧ್ಯ, ಗೌರವ ಸಲಹೆಗಾರರಾದ ರಂಜನ್ ಕಲ್ಕೂರ್, ಕೆ. ಅರವಿಂದ್ ಆಚಾರ್ಯ, ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಶ್ರೀಶ ಕಡೆಕಾರ್ ಉಪಸ್ಥಿತರಿದ್ದರು.