ಉಡುಪಿ: ಕಾಂತಾರ ಸಿನಿಮಾದ ಮೂಲಕ ದೇಶದಾದ್ಯಂತ ತನ್ನದೇ ಆದ ಛಾಪು ಮೂಡಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು, ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೌದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ದೇವರು ಮೆಚ್ಚುವಂತ ಕೆಲಸ ಮಾಡಿದ್ದಾರೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಎಂಬ ಚಿತ್ರ ನಿರ್ದೇಶಿಸಿ, ನಿರ್ಮಿಸಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ಜಾಗೃತಿ ಮೂಡಿಸಿದ್ದರು. ಇದೀಗ ತನ್ನ ಬ್ಯುಸಿ ಶೆಡ್ಯೂಲ್ ನಲ್ಲೂ ಕೂಡ ರಿಷಬ್ ಶೆಟ್ಟಿ ತಮ್ಮ ಹುಟ್ಟೂರಿನ ಸಮಸ್ಯೆಗೆ ಸ್ಪಂದಿಸಿದ್ದಾರೆ. ತಾನು ಓದಿದ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ. ಆ ಮೂಲಕ ಸಿನಿಮಾದಲ್ಲಿ ಮಾತ್ರವಲ್ಲ, ನಿಜಜೀವನದಲ್ಲಿಯೂ ಸರಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.
ಭಾನುವಾರ ನಡೆದ ಎಸ್‌ಡಿಎಂಸಿ ಸಭೆಯಲ್ಲಿ ರಿಷಬ್ ಶೆಟ್ಟಿ ಅವರು, ಶಾಲೆಯನ್ನು ದತ್ತು ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮೂರು ದಶಕಗಳ ಹಿಂದೆ ಶಾಲೆಯಲ್ಲಿ 400 ಮಂದಿ ಮಕ್ಕಳಿದ್ದ ಕೆರಾಡಿ ಶಾಲೆಯಲ್ಲಿ ಪ್ರಸ್ತುತ 71 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಬ್ಬರು ಖಾಯಂ ಶಿಕ್ಷಕರಿದ್ದಾರೆ, ಉಳಿದವರು ಗೌರವ ಶಿಕ್ಷಕರಾಗಿದ್ದಾರೆ. ಸ್ವತಃ ಅವರೇ ಶಾಲೆಯ ಸ್ಥಿತಿಗತಿಯನ್ನು ತಿಳಿದುಕೊಂಡಿದ್ದು, ರಿಷಬ್ ಫೌಂಡೇಶನ್ ಮೂಲಕ ಮುಂದಿನ ಶೈಕ್ಷಣಿಕ ವರ್ಷದಿಂದ 5 ವರ್ಷಗಳ ಅವಧಿಗೆ ಈ ಶಾಲೆಯನ್ನು ದತ್ತು ಪಡೆಯುತ್ತೇನೆ ಎಂದು ಘೋಷಿಸಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಎಲ್‌ಕೆಜಿ – ಯುಕೆಜಿ, ಸ್ಪೋಕನ್ ಇಂಗ್ಲಿಷ್ ಕಲಿಕೆ ಆರಂಭಿಸುವ ಯೋಜನೆ ಕೂಡ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಶೀಘ್ರದಲ್ಲೇ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆಂದು ಉಡುಪಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಿಷಬ್ ಶೆಟ್ಟಿ ಅವರ ಕಾರ್ಯಕ್ಕೆ ಸಾಮಾಜಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ