Tuesday, November 3, 2026

ಸಂವಿಧಾನ, ಮಾನವೀಯತೆ ಉಳಿಸಲು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಅಗತ್ಯ: ಪ್ರಕಾಶ್ ರಾಜ್

Must read

ಉಡುಪಿ: ಪ್ರಸ್ತುತ ದೇಶದ ಪರಿಸ್ಥಿತಿ ವೇದಿಕೆಗಳಲ್ಲಿ ನಿಂತು ಭಾಷಣ ಮಾಡುವ ಕಾಲವಲ್ಲ. ಸಂವಿಧಾನ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡಲು ಬೀದಿಗಿಳಿದು ಹೋರಾಟ ನಡೆಸಬೇಕಾದ ಕಾಲ ಇದಾಗಿದ್ದು, ಇದು ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಪ್ರಕಾಶ್ ರಾಜ್ ಹೇಳಿದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಮಿಷನ್ ಕಂಪೌಂಡ್‌ನ ಯುಬಿಎಂಸಿ ಆಡಿಟೋರಿಯಂನಲ್ಲಿ ನಡೆದ ಸ್ನೇಹ ಸಮಾವೇಶದಲ್ಲಿ ‘ಮಾನವ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಜನರಿಗೆ ಸಹನೆಯಿಂದ ಮನವರಿಕೆ ಮಾಡಿಕೊಡಬೇಕು. ಆರ್ಥಿಕತೆ ಕುಸಿತ, ಯುವಕರ ಭವಿಷ್ಯ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳ ಅಂಕಿ-ಅಂಶಗಳನ್ನು ಮುಂದಿಟ್ಟು ಹೋರಾಟ ರೂಪಿಸಬೇಕಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆ ಜಿಲ್ಲೆಗಳಿಗೆ ತೆರಳಿ ಜನಪರ ಧ್ವನಿಯನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಏಕೆ ರಚಿಸಿದರು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸ್ವತಂತ್ರ ಭಾರತ ಮತ್ತೆ ದಬ್ಬಾಳಿಕೆಯ ಶಕ್ತಿಗಳ ಕೈಗೆ ಸಿಲುಕಬಾರದು ಎಂಬ ಉದ್ದೇಶದಿಂದ ಸಂವಿಧಾನ ರಚನೆಯಾಗಿದೆ. ಆದರೆ, ಇಂದು ಅದನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ವಿರುದ್ಧ ಕಿರುಕುಳ: ಸಚಿವರ ಆರೋಪ
ಪ್ರಶಸ್ತಿ ಪ್ರದಾನ ಮಾಡಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಕೇಂದ್ರ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು. ಇದರ ವಿರುದ್ಧ ಧ್ವನಿ ಎತ್ತುವವರಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ನಿವೃತ್ತ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಮೂರು ಪ್ರಶಸ್ತಿಗಳ ಪ್ರದಾನ:

ಮೂರು ಪ್ರಶಸ್ತಿಗಳ ಪ್ರದಾನ:
ಸಮಾವೇಶದಲ್ಲಿ ಪ್ರಕಾಶ್ ರಾಜ್ ಹಾಗೂ ಸಚಿವ ರಿಜ್ವಾನ್ ಅರ್ಷದ್ ಅವರಿಗೆ ‘ಮಾನವ ರತ್ನ’, ದುಬೈ ಉದ್ಯಮಿ ಹಿದಾಯತುಲ್ಲಾ ಅಬ್ಬಾಸ್ ಅವರಿಗೆ ‘ಸೇವಾ ರತ್ನ’ ಹಾಗೂ ಬರಹಗಾರ, ಸಾಮಾಜಿಕ ಹೋರಾಟಗಾರ ಸುರೇಶ್ ಭಟ್ ಬಾಕ್ರಬೈಲ್ ಅವರಿಗೆ ‘ಸೌಹಾರ್ದ ರತ್ನ’ ಪ್ರಶಸ್ತಿಯನ್ನು ತಲಾ ₹50 ಸಾವಿರ ನಗದು ಪುರಸ್ಕಾರದೊಂದಿಗೆ ಪ್ರದಾನ ಮಾಡಲಾಯಿತು.
ಪ್ರಕಾಶ್ ರಾಜ್ ಮತ್ತು ಸುರೇಶ್ ಭಟ್ ಅವರು ಪ್ರಶಸ್ತಿಯ ನಗದು ಪುರಸ್ಕಾರವನ್ನು ಎಸ್‌ಐಆರ್ ಹೋರಾಟಕ್ಕಾಗಿ ಸಾಮಾಜಿಕ ಹೋರಾಟಗಾರ ಕೆ.ಎಲ್. ಅಶೋಕ್ ಅವರಿಗೆ ಹಸ್ತಾಂತರಿಸಿದರು. ಹಿದಾಯತುಲ್ಲಾ ಅಬ್ಬಾಸ್ ಅವರು ತಮ್ಮ ನಗದು ಪುರಸ್ಕಾರವನ್ನು ಹೂಡೆಯ ಸರ್ಕಾರಿ ಶಾಲೆಗಾಗಿ ಉಸ್ತಾದ್ ಸಾದಿಕ್ ಅವರಿಗೆ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಬಿಪಿನ್ ಚಂದ್ರಪಾಲ್ ಕಾರ್ಕಳ, ಜೆರಾಲ್ಡ್ ಪಿಂಟೋ, ಚಂದ್ರಶೇಖರ್ ಶೆಟ್ಟಿ ಕುಂದಾಪುರ, ಗೀತಾ ಸುರೇಶ್ ಕುಮಾರ್ ಬೈಂದೂರು ಹಾಗೂ ಲೇಖಕಿ ಫಾತಿಮಾ ರಲಿಯಾ ಹೆಜಮಾಡಿ ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಮುಹಮ್ಮದ್ ಯಾಸೀನ್ ಮಲ್ಪೆ ಆಶಯ ಭಾಷಣ ಮಾಡಿದರು. ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

spot_img

More articles

LEAVE A REPLY

Please enter your comment!
Please enter your name here