ಉಡುಪಿ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವಿಕೋಪಕ್ಕೆ ತಿರುಗಿ, ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಪ್ರಮೋದ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಸುಜಿತ್ ಪಿಂಟೊ, ಮನೆಗೆ ಸಾಮಗ್ರಿಗಳನ್ನು ಪೂರೈಸುತ್ತಿದ್ದ ರಿಕ್ಷಾ ಚಾಲಕ ಪ್ರಮೋದ್‌ಗೆ ಹಣ ನೀಡಲು ಬಾಕಿ ಇದ್ದುದೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್, ಸುಜಿತ್‌ನನ್ನು ತಾನು ಇದ್ದ ಸ್ಥಳಕ್ಕೆ ಬರುವಂತೆ ಕರೆದಿದ್ದನು. ಅದರಂತೆ ಅಲ್ಲಿಗೆ ತೆರಳಿದ್ದ ಸುಜಿತ್ ಮತ್ತು ಪ್ರಮೋದ್ ಮದ್ಯದ ಅಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಟ್ಟಿಗೆದ್ದ ಪ್ರಮೋದ್, ಕಬ್ಬಿಣದ ರಾಡ್‌ನಿಂದ ಸುಜಿತ್‌ನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ
ಸುಜಿತ್ ಪಿಂಟೊ ವಿರುದ್ಧ ಹಲವು ಕೊಲೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ ಹಾಗೂ 2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲೂ ಸುಜಿತ್ ಆರೋಪಿಯಾಗಿದ್ದನು.
ಮೊದಲು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ವಾಸವಾಗಿದ್ದ ಸುಜಿತ್, ಕೆಲ ವರ್ಷಗಳ ಹಿಂದೆ ಬ್ರಹ್ಮಾವರಕ್ಕೆ ಸ್ಥಳಾಂತರಗೊಂಡಿದ್ದನು. ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬ್ರಹ್ಮಾವರ: ಕಬ್ಬಿಣದ ರಾಡ್ ನಿಂದ ಹೊಡೆದು ರೌಡಿಶೀಟರ್ ನ ಬರ್ಬರ ಹತ್ಯೆ; ಆರೋಪಿ ರಿಕ್ಷಾ ಚಾಲಕನ ಬಂಧನ

