ಉಡುಪಿ: ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್‌ಗಳನ್ನು ಇಳಿಸುವ ವೇಳೆ ಸಂಭವಿಸಿದ ಅವಘಡದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ರಿಕ್ಷಾ ಚಾಲಕ ಸುನಿಲ್ ಬೈಲಕೆರೆ (45) ಮೃತಪಟ್ಟಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಪರಿಸರದ ನಿವಾಸಿಯಾಗಿದ್ದ ಸುನಿಲ್, ಶೀರೂರು ಮಠದ ದಿವಂಗತ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಪ್ತರಾಗಿದ್ದರು. ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಉಡುಪಿ ನಗರದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಫಲಾಪೇಕ್ಷೆಯಿಲ್ಲದೆ ನೆರವಿಗೆ ಧಾವಿಸುತ್ತಿದ್ದ ಅವರು, ಸಾಮಾಜಿಕ ಸೇವೆಯ ಮೂಲಕ ಜನರ ಪ್ರೀತಿ ಗಳಿಸಿದ್ದರು.
ಸಂಕಷ್ಟದಲ್ಲಿ ಜನರ ನೆರವಿಗೆ ಧಾವಿಸುತ್ತಿದ್ದ ಸುನಿಲ್
ಕಲ್ಸಂಕ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಉಂಟಾದಾಗ ಪೊಲೀಸರೊಂದಿಗೆ ಕೈಜೋಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸುತ್ತಿದ್ದರು. ಬೈಲಕೆರೆ ಪರಿಸರದಲ್ಲಿ ನೆರೆ ಬಂದಾಗ ಹಲವು ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಲ್ಲಿ ನೆರವಾಗುತ್ತಿದ್ದರು. ಬೆಂಕಿ ಅವಘಡ ಸೇರಿದಂತೆ ಯಾರಿಗೇ ಸಂಕಷ್ಟ ಎದುರಾದರೂ ತಕ್ಷಣ ಸ್ಥಳಕ್ಕೆ ಧಾವಿಸಿ, ಸಂತ್ರಸ್ತರ ನೆರವಿಗೆ ನಿಲ್ಲುತ್ತಿದ್ದರು.
ರಿಕ್ಷಾ ಚಾಲಕರ ಹಾಗೂ ಬಡವರ ಪರ ಸದಾ ಧ್ವನಿಯಾಗಿದ್ದ ಸುನಿಲ್, ಶ್ರೀಕೃಷ್ಣ ಮಠ, ಕಲ್ಸಂಕ ಮತ್ತು ಬೈಲಕೆರೆ ಪರಿಸರದಲ್ಲಿ ಚಿರಪರಿಚಿತರಾಗಿದ್ದರು. ಸದಾ ಚಟುವಟಿಕೆಯಿಂದ ಓಡಾಡುತ್ತಿದ್ದ ಅವರ ಅಕಾಲಿಕ ನಿಧನದಿಂದ ಈ ಭಾಗದ ಜನರು ತೀವ್ರ ದುಃಖಕ್ಕೀಡಾಗಿದ್ದಾರೆ.
ಗಾಜಿನ ಬ್ಲಾಕ್‌ಗಳನ್ನು ಇಳಿಸುವಾಗ ಅವಘಡ:
ಬೃಹತ್ ಲಾರಿಯಲ್ಲಿದ್ದ ಸುಮಾರು ನಾಲ್ಕು ಟನ್ ತೂಕದ ಗಾಜಿನ ಬ್ಲಾಕ್‌ಗಳನ್ನು ಇಳಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ, ಗಾಜು ಏಕಾಏಕಿ ಸುನಿಲ್ ಇದ್ದ ಕಡೆಗೆ ವಾಲಿ ಬಿದ್ದಿದೆ ಎನ್ನಲಾಗಿದೆ. ಗಾಜಿನ ಬ್ಲಾಕ್‌ಗಳ ನಡುವೆ ಸಿಲುಕಿದ ಅವರನ್ನು ತಕ್ಷಣ ಹೊರತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಕ್ರೇನ್ ಬಳಸಿ ಗಾಜನ್ನು ತೆರವುಗೊಳಿಸಿ ಗಾಯಗೊಂಡಿದ್ದ ಸುನಿಲ್ ಅವರನ್ನು ಹೊರತೆಗೆದು ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ತಾಯಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮಂಗಳವಾರ ಅಂತಿಮ ದರ್ಶನ:
ಸುನಿಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಕ್ಟೋಬರ್ 27ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮಠದ ಪಾರ್ಕಿಂಗ್ ಪ್ರದೇಶದ ಬಳಿಯಿರುವ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉಡುಪಿ: ಗಾಜಿನ ಕಾರ್ಖಾನೆಯಲ್ಲಿ ಅವಘಡ; ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಮೃತ್ಯು

