Friday, November 22, 2024

ಉಡುಪಿ: ನಕಲಿ ಕ್ಲಿನಿಕ್, ಲ್ಯಾಬ್‌ಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿ; ಕ್ಲಿನಿಕ್‌ ಸೀಜ್ ಮಾಡಿ ಪ್ರಕರಣ ದಾಖಲು

Must read

ಉಡುಪಿ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಯುವ ಉದ್ದೇಶದೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿವಿಧೆಡೆ ಧಿಡೀರ್ ದಾಳಿ ಹಾಗೂ ತಪಾಸಣೆ ಕೈಗೊಂಡು ಕ್ಲಿನಿಕ್ ಹಾಗೂ ಲ್ಯಾಬ್‌ಗಳ ನ್ಯೂನ್ಯತೆ ಕಂಡು ಬಂದ ಹಿನ್ನೆಲೆ, ನಕಲಿ ವೈದ್ಯ ತಡೆ ಹಾಗೂ ಕೆ.ಪಿ.ಎಂ.ಇ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಲ್ಯಾಬ್ ಹಾಗೂ ಕ್ಲಿನಿಕ್‌ಗಳನ್ನು ಸೀಜ್ ಮಾಡಿದ್ದಾರೆ.


ಉಡುಪಿ ತಾಲೂಕು ಪ್ರಾಧಿಕಾರ ಹಾಗೂ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡವು ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್‌ನಲ್ಲಿ ಡಾ. ಎ.ಆರ್ ಆಚಾರ್ಯ ರವರು ಆಯುರ್ವೇದ ಕ್ಲಿನಿಕ್‌ನ ನೋಂದಣಿ ಹೊಂದಿ ಅಲೋಪತಿಕ್ ಪದ್ಧತಿಯ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದೆ.


ಕುಂದಾಪುರ ತಾಲೂಕು ಪ್ರಾಧಿಕಾರ ಮತ್ತು ಆರೋಗ್ಯ ಅಧಿಕಾರಿಗಳ ತಂಡವು ನಾವುಂದದ ನಂಬಿಯಾರ್ ಕ್ಲಿನಿಕ್ ನಲ್ಲಿ ಡಾ. ಪ್ರಜೀತ್ ಎಸ್ ನಂಬಿಯಾರ್ ಅವರು, ಆಯುರ್ವೇದಿಕ್ ಪದ್ಧತಿಯಲ್ಲಿ ನೋಂದಾವಣೆ ಹೊಂದಿ ಅಲೋಪತಿಕ್ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿರುವ ಹಿನ್ನೆಲೆ, ಪ್ರಕರಣ ದಾಖಲಿಸಲಾಗಿದೆ.


ಕುಂದಾಪುರ ತಾಲೂಕು ಪ್ರಾಧಿಕಾರ ಹಾಗೂ ಆರೋಗ್ಯ ಅಧಿಕಾರಿಗಳ ತಂಡವು ಉಪ್ಪುಂದದ ಸುಷ್ಮಾ ಕ್ಲಿನಿಕಲ್ ಲ್ಯಾಬ್ ಅನ್ನು ಲತಾ ಸುನೀಲ್ ಕೆ ಅವರು ಪರವಾನಿಗೆ ಇಲ್ಲದೇ ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆ, ಲ್ಯಾಬ್ ಅನ್ನು ಸೀಝ್ ಮಾಡಿ, ಪ್ರಕರಣ ದಾಖಲಿಸಲಾಗಿದೆ.


ಉಡುಪಿ ತಾಲೂಕು ಪ್ರಾಧಿಕಾರ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ತಂಡವು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಗಳೊಂದಿಗೆ ಜಂಟಿ ತಪಾಸಣೆ ನಡೆಸಿ, ಆರೂರಿನಲ್ಲಿ ಸಂದೇಶ್ ರಾವ್ ರವರು ತಜ್ಞತೆ ಹಾಗೂ ಪರವಾನಿಗೆ ಇಲ್ಲದೆ ಕ್ಲಿನಿಕ್‌ನ್ನು ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆ, ಕ್ಲಿನಿಕ್‌ನ್ನು ಸೀಜ್ ಮಾಡಿ, ಪ್ರಕರಣ ದಾಖಲಾಗಿದೆ.


ಕುಂದಾಪುರ ತಾಲೂಕು ಪ್ರಾಧಿಕೃತ ಹಾಗೂ ಆರೋಗ್ಯ ಅಧಿಕಾರಿಗಳ ತಂಡವು ಕುಂದಾಪುರದ ಬಯೋಲಿನ್ ಲ್ಯಾಬ್ ನಲ್ಲಿ ರಾಜ್ಯದ ನೋಂದಾವಣೆ ಪ್ರಮಾಣ ಪತ್ರವನ್ನು ಹೊಂದಿರದವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಕಂಡುಬಂದಿರುವ ಹಿನ್ನೆಲೆ, ಎಫ್.ಐ.ಆರ್ ದಾಖಲಿಸಲಾಗಿದೆ.


ಸಾರ್ವಜನಿಕರು ಜಾಗೃತೆ ವಹಿಸಿ ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ನೊಂದಾವಣೆಯಾಗಿರದ ಅಥವಾ ನಕಲಿ ವೈದ್ಯರುಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಾರದು. ನಕಲಿ ವೈದ್ಯರ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಮೊ.ನಂ. 8277505911, ಕಾರ್ಕಳ ಮೊ.ನಂ. 8277505892 ಅಥವಾ ಉಡುಪಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದೂ.ಸಂಖ್ಯೆ: 0820-2525566, 2536650 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

spot_img

More articles

LEAVE A REPLY

Please enter your comment!
Please enter your name here