Friday, October 16, 2026

ಬ್ರಹ್ಮಾವರದಲ್ಲಿ ಅ.17ರಿಂದ ಕೃಷಿ–ತೋಟಗಾರಿಕೆ ಮೇಳ

Must read

ಉಡುಪಿ: ಕೃಷಿ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನಗಳ ಪರಿಚಯ ಹಾಗೂ ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಸಂವಾದ ಕಲ್ಪಿಸುವ ಉದ್ದೇಶದಿಂದ ಅ.17 ಮತ್ತು 18ರಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ–2026 ಆಯೋಜಿಸಲಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಎಚ್. ರೇವಣ್ಣ ರೇವಣ್ಣವರ ತಿಳಿಸಿದರು.
ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಮೇಳ ನಡೆಯಲಿದೆ. ಬರ ಪರಿಸ್ಥಿತಿಯಲ್ಲಿ ಕೃಷಿ ನಿರ್ವಹಣೆ, ಭವಿಷ್ಯದ ತೋಟಗಾರಿಕಾ ಬೆಳೆಗಳು, ಅಡಿಕೆ ಬೆಳೆಯ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ, ಲಾಭದಾಯಕ ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಮೇಳದಲ್ಲಿ ವಿಶೇಷ ಒತ್ತು ನೀಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಮೇಳ ಉದ್ಘಾಟಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸುವರು. ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿ ಎಂ.ವಿ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಭತ್ತದ ಹೊಸ ತಳಿಗಳು, ಬೀಜೋತ್ಪಾದನೆ, ಅಡಿಕೆ, ತೆಂಗು, ಗೋಡಂಬಿ, ಮಾವು ಮತ್ತು ರಬ್ಬರ್ ಬೆಳೆಗಳ ಪ್ರಾತ್ಯಕ್ಷಿಕೆ, ತೆಂಗಿನ ತೋಟದಲ್ಲಿ ಅಂತರ ಬೆಳೆ ಪದ್ಧತಿ, ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ಡ್ರೋನ್ ಬಳಕೆ, ತುಂತುರು ಮತ್ತು ಹನಿ ನೀರಾವರಿ ಪದ್ಧತಿಗಳ ಪ್ರದರ್ಶನ ಇರಲಿದೆ. ಜೈವಿಕ ತ್ಯಾಜ್ಯವನ್ನು ಬಂಗಾರದ ಹುಳುಗಳ ಮೂಲಕ ಶೀಘ್ರ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನೂ ಪರಿಚಯಿಸಲಾಗುವುದು ಎಂದರು.
ಹೈನುಗಾರಿಕೆ, ಕೋಳಿ, ಕುರಿ, ಹಂದಿ ಮತ್ತು ಜೇನು ಸಾಕಣೆ, ಮೀನು ಸಾಕಣೆ ಕೊಳ, ಚಿಟ್ಟೆ ಉದ್ಯಾನ ಸೇರಿದಂತೆ ಕೃಷಿ ಯಂತ್ರೋಪಕರಣಗಳು, ಬೀಜಗಳು ಮತ್ತು ಸಸಿಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ 200ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳಿಂದ ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಪ್ರಗತಿಪರ ರೈತರಿಗೆ ಸನ್ಮಾನ
ಮೇಳದಲ್ಲಿ ಭವಿಷ್ಯದ ತೋಟಗಾರಿಕಾ ಬೆಳೆಗಳು, ಅಡಿಕೆ ರೋಗಗಳ ನಿರ್ವಹಣೆ, ಹೈನುಗಾರಿಕೆ, ಮೀನುಗಾರಿಕೆ ಹಾಗೂ ರೈತ ಉತ್ಪಾದಕ ಕಂಪನಿಗಳು ಎದುರಿಸುತ್ತಿರುವ ಸವಾಲುಗಳ ಕುರಿತು ತಾಂತ್ರಿಕ ಗೋಷ್ಠಿಗಳು ಮತ್ತು ರೈತ–ವಿಜ್ಞಾನಿಗಳ ನೇರ ಸಂವಾದ ನಡೆಯಲಿದೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರು ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು. ಏಳು ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ರೇವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲ ರವಿರಾಜ್ ಶೆಟ್ಟಿ, ವಿಸ್ತರಣಾ ವಿಷಯ ತಜ್ಞ ಮೋಹನ್ ಕುಮಾರ್, ಹಿರಿಯ ಕ್ಷೇತ್ರ ಅಧೀಕ್ಷಕ ನವೀನ್ ಎನ್. ಹಾಗೂ ಕೆವಿಕೆ ನಿರ್ದೇಶಕಿ ಭೂಮಿಕಾ ಎಚ್. ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here