Wednesday, January 22, 2025

ಉಚ್ಚಿಲ ಪೇಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿಲ್ಲದ ಅಪಘಾತ; ಉಚ್ಚಿಲ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Must read

ಉಡುಪಿ: ಉಚ್ಚಿಲ ಪೇಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿ ಖಂಡಿಸಿ ಸೋಮವಾರ ಉಚ್ಚಿಲಪೇಟೆಯಲ್ಲಿ ಉಚ್ಚಿಲ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಹೆದ್ದಾರಿ ತಡೆ ನಡೆಸಿ, ಅಸಮರ್ಪಕ ಹೆದ್ದಾರಿ ಕಾಮಗಾರಿ, ಬೀದಿ ದೀಪ, ಪಾದಚಾರಿಗಳಿಗೆ ಆಗುತ್ತಿರುವ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಈ ಹೆದ್ದಾರಿ ತಡೆಗೆ ಉಚ್ಚಿಲ ಪರಿಸರದ ಸಾರ್ವಜನಿಕರು ಸಾಥ್ ಕೊಟ್ಟರು. ಅಲ್ಲದೆ ಪ್ರತಿಭಟನಾ ಸಂದರ್ಭ ಉಚ್ಚಿಲ ಪೇಟೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದವು.

ಇನ್ನೆಷ್ಟು ಬಲಿ ಕೊಡಬೇಕು; ಸಾರ್ವಜನಿಕರ ಆಕ್ರೋಶ
ಉಚ್ಚಿಲ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಖ್ಯವಾಗಿ ರಸ್ತೆ ದಾಟಲು(Road Crossing) ವ್ಯವಸ್ಥೆ ಇಲ್ಲ, ಬ್ಯಾರಿಕೇಡ್ ಸಮಸ್ಯೆ, ರಾತ್ರಿ ಬೀದಿದೀಪ ಉರಿಯುತ್ತಿಲ್ಲ, ಮಳೆ ನೀರು ಸಮರ್ಪಕವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲ, ಬೈಪಾಸ್ ರಸ್ತೆ ಇದ್ದರೂ ಸಮರ್ಪಕವಾಗಿಲ್ಲ, ಈ ಎಲ್ಲ ಕಾರಣದಿಂದಲೇ ಉಚ್ಚಿಲ ಪೇಟೆ ಸೇರಿದಂತೆ ಎರ್ಮಾಳ್-ಮೂಳೂರುನಲ್ಲಿಯೂ ಅಪಘಾತ ಹೆಚ್ಚುತ್ತಿದ್ದು, ಹಲವು ಜೀವ ಈಗಾಗಲೇ ಬಲಿಯಾಗಿದೆ. ಇನ್ನೆಷ್ಟು ಬಲಿ ಕೊಡಬೇಕೆಂದು ಸೇರಿದ್ದ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಸಾರ್ವಜನಿಕ ಸಭೆ
ಉಚ್ಚಿಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಸಿರಾಜ್ NH ಅವರ ನೇತೃತ್ವದಲ್ಲಿ ನಡೆದ ಹೆದ್ದಾರಿ ತಡೆಗೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, MA ಗಫೂರ್, ಯೋಗೀಶ್ ಶೆಟ್ಟಿ ಸೇರಿದಂತೆ ಉಚ್ಚಿಲ ಪರಿಸರದ ಹಲವು ಗಣ್ಯರು ಭಾಗವಹಿಸಿದ್ದು, ಈ ವೇಳೆ ಅಪಘಾತಕ್ಕೆ ಕಾರಣವಾಗುತ್ತಿರುವ ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಯಿತು.
ಪ್ರಮುಖ ಬೇಡಿಕೆಗಳು
ಉಚ್ಚಿಲ ಪೇಟೆಯಲ್ಲಿ ವಾಹನ ಕ್ರಾಸಿಂಗ್ ವ್ಯವಸ್ಥೆ
ಎರ್ಮಾಳ್ ಡಿವೈಡರ್‌ನಿಂದ ಅಲ್-ಇಹ್ಸಾನ್ ಶಾಲೆಯ ಡಿವೈಡರ್ ತನಕ ಹೆದ್ದಾರಿ ಮಧ್ಯೆ (ಬ್ರೈಟ್) ದಾರಿದೀಪ ಅಳವಡಿಕೆ
ಉಚ್ಚಿಲ ಪೇಟೆಯಲ್ಲಿ ಐಮಾಸ್ ಲೈಟ್ ಅಳವಡಿಸುವಿಕೆ
ಉಚ್ಚಿಲ ಪೇಟೆಯಲ್ಲಿ ಪಾದಾಚಾರಿಗಳು ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ
ಸರ್ವೀಸ್ ರಸ್ತೆಯಲ್ಲಿ ನೀರು ಹಾದು ಹೋಗಲು ಸಮರ್ಪಕ ವ್ಯವಸ್ಥೆ
ಮೂಳೂರು ಯೂನಿಯನ್ ಬ್ಯಾಂಕ್ ಹತ್ತಿರದ ಡಿವೈಡರ್ ಕ್ರಾಸಿಂಗ್‌ನ ಕೊನೆಯಲ್ಲಿ ಸಮರ್ಪಕವಾದ ಕ್ರಾಸಿಂಗ್ ವ್ಯವಸ್ಥೆ
ಸರ್ವಿಸ್ ರಸ್ತೆಯ ಡಿವೈಡರ್‌ನ ಮಧ್ಯೆ ಕಬ್ಬಿಣದ ತಡೆಬೇಲಿ ಅಳವಡಿಸುವಿಕೆ
ಸರ್ವಿಸ್ ರಸ್ತೆಯ ಸೂಕ್ತವಾದ ಸ್ಥಳಗಳಲ್ಲಿ “ರಸ್ತೆ ಉಬ್ಬು” ಅಳವಡಿಕೆ

ಮನವಿ ಸಲ್ಲಿಕೆ
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕಾಪು ತಹಸಿಲ್ದಾರ್ ಪ್ರತಿಭಾ ಆರ್, ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಜಾವೇದ್, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಸಹಿತ ವಿವಿಧ ಅಧಿಕಾರಿಗಳಿಗೆ ಅಪಘಾತಕ್ಕೆ ಕಡಿವಾಣ ಹಾಕುವಂತೆ ಹಾಗು ನಾಗರಿಕರ ಬೇಡಿಕೆಯ ಮನವಿ ಸಲ್ಲಿಸಲಾಯಿತು.

ವಾರದೊಳಗೆ ಸಭೆ: ಗುರ್ಮೆ ಸುರೇಶ್ ಶೆಟ್ಟಿ
ಈ ವೇಳೆ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೆ ದಿನೆ ಅಪಘಾತಗಳು ಹೆಚ್ಚುತ್ತಿವೆ ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಸಂಸದರೊಂದಿಗೆ ಚರ್ಚಿಸಿ ವಾರದೊಳಗೆ ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದಂತೆ ಸಭೆ ಕರೆದು ಉಚ್ಚಿಲ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಕೆಲವು ತುರ್ತು ಕಾಮಗಾರಿ ಕೈಗೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿ ಬಳಿಕ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಅಧಿಕಾರಗಳ ತರಾಟೆ!
ತಹಶೀಲ್ದಾರ್ ಪ್ರತಿಭಾ, ಸಿಪಿಐ ಜಯಶ್ರೀ ಮಾನೆ, ರಾಷ್ಟ್ರೀಯ ಪ್ರಾಧಿಕಾರದ ಯೋಜನಾ ನಿರ್ದೇಶಕ(Project Director) ಜಾವೇದ್ ಅವರನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತುರ್ತಾಗಿ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದರು.

ಅಪಘಾತ ಕಡಿವಾಣಕ್ಕೆ ಕ್ರಮ: ಕಾಪು ತಹಶೀಲ್ದಾರ
ಈ ವೇಳೆ ಮಾತನಾಡಿದ ಕಾಪು ತಹಶೀಲ್ದಾರ ಪ್ರತಿಭಾ, ಉಚ್ಚಿಲ ಪೇಟೆಯ ರಾಷ್ಟ್ರೀಯ ಹೆದ್ದಾರಿ 66 ರ ಅಸಮರ್ಪಕ ಕಾಮಗಾರಿಯ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದೀರಿ, ಈ ಬಗ್ಗೆ ಈ ಹಿಂದೆ ಕೂಡ ಜಿಲ್ಲಾಧಿಕಾರಿಯವರ ಬಳಿ ಚರ್ಚೆ ನಡೆಸಲಾಗಿದೆ. ಈ ಮಧ್ಯೆ ಈ ಹೆದ್ದಾರಿಯಲ್ಲಿ ಈಗಾಗಲೇ 66 ಮಂದಿ ಸಾವನ್ನಪ್ಪಿದ್ದಾರೆ. ಈ ಎಲ್ಲ ಸಾವಿಗೆ ಹೆದ್ದಾರಿಯ ಅಸಮರ್ಪಕ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮುಂದೆ ಇಂಥ ಸಾವಿನ ಪ್ರಕರಣ ಆಗದಂತೆ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತದಿಂದ ಖಂಡಿತ ಕ್ರಮ ವಹಿಸುತ್ತೇವೆ. ಅದಕ್ಕಾಗಬೇಕಾದ ಎಲ್ಲ ಕಾರ್ಯಗಳಿಗೆ ಗಮನ ಹರಿಸುತ್ತೇವೆ ಎಂದು ಭರವಸೆ ನೀಡಿದರು.

ಬೇಡಿಕೆ ಈಡೇರಿಕೆಗೆ 20 ದಿನಗಳ ಗಡುವು
ಹೆದ್ದಾರಿ ತಡೆ ನಡೆಸಿದ ಬಳಿಕ ಉಚ್ಚಿಲ ನಾಗರಿಕ ಹೋರಾಟ ಸಮಿತಿಯು ತಮ್ಮ ಬೇಡಿಕೆ ಈಡೇರಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗು ಜಿಲ್ಲಾಡಳಿತಕ್ಕೆ 20 ದಿನಗಳ ಗಡುವು ನೀಡಿದ್ದು, ಒಂದು ವೇಳೆ ಈ ಬೇಡಿಕೆ ಈಡೇರದಿದ್ದರೆ ಬೃಹತ್ ಮಟ್ಟದ ಹೋರಾಟಕ್ಕಿಳಿಯಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಬಡಾ ಗ್ರಾ. ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ನಾಗರಿಕ ಸಮಿತಿಯ ವೇದವ್ಯಾಸ ಬಂಗೇರ, ಜಲಾಲುದ್ದೀನ್, ಸುಕುಮಾರ್, ಪ್ರಮುಖರಾದ ಎಂ.ಎ. ಗಫೂರ್, ಶೇಖರ ಹೆಜಮಾಡಿ, ಇಬಾದುಲ್ಲಾ, ಮುಸ್ತಾಫ ಸಅದಿ, ಯು.ಸಿ. ಶೇಖಬ್ಬ, ಶೇಖರ್ ಹೆಜ್ಮಾಡಿ, ಗ್ರಾಪಂ ಉಪಾಧ್ಯಕ್ಷ ದೀಪಕ್, ಮಾಜಿ ಅಧ್ಯಕ್ಷ ಚಂದ್ರ ಶೇಖರ್, ಜ್ಯೋತಿ, ಸದಸ್ಯರಾದ ಮಜೀದ್ ಪೊಲ್ಯ, ಅಸೀಫ್ ವೈಸಿ, ರಫೀಕ್ SK, ರಮೇಶ್ ಅಂಚನ್, ರಝಕ್ ಬಗ್ಗತೋಟ, ಇಂದಿರಾ ಶೆಟ್ಟಿ, ವೆರೋನಿಕಾ, ಶಕುಂತಲಾ, ಪ್ರಸಾದ್, SDPI ಹನೀಫ್ ಮೂಳೂರು, ರಝಕ್ ವೈಎಸ್, ಸಾದಿಕ್ NH ಮೊದಲಾದವರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.

ಈ ಹೋರಾಟಕ್ಕೆ ಗ್ರಾಮದ ಸಮಸ್ತ ಜನರು, ಪಂಚಾಯತ್ ಸದಸ್ಯರು, ವ್ಯಾಪಾರಸ್ಥರು, ಆಟೋ ಚಾಲಕರು, ಟೆಂಪೋ ಚಾಲಕರು ಹಾಗೂ ಸಾರ್ವಜನಿಕರು, ಸಂಘ ಸಂಸ್ಥೆಯವರು ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದರು.

spot_img

More articles

LEAVE A REPLY

Please enter your comment!
Please enter your name here