Thursday, January 9, 2025

ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಅಂಡರ್ ಪಾಸ್ ಕಾಮಗಾರಿ ವಿರೋಧಿಸಿ ಹೆದ್ದಾರಿ ಬಳಕೆದಾರರ ವೇದಿಕೆಯಿಂದ ದಿಢೀರ್ ಪ್ರತಿಭಟನೆ

Must read

ಉಡುಪಿ: ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಅಂಡರ್ ಪಾಸ್ ಕಾಮಗಾರಿ ವಿರೋಧಿಸಿ ಹಾಗೂ ಎಲಿವೇಟೆಡ್ ಫ್ಲೈ ಓವರ್ ಕಾಮಗಾರಿಗೆ ಒತ್ತಾಯಿಸಿ ಹೆದ್ದಾರಿ ಬಳಕೆದಾರರ ವೇದಿಕೆ ನೇತೃತ್ವದಲ್ಲಿ ಅಂಬಲಪಾಡಿ ಜಂಕ್ಷನ್ ನಲ್ಲಿ‌ ಇಂದು ದಿಢೀರ್ ಪ್ರತಿಭಟನೆ ನಡೆಸಲಾಯಿತು.

ಸಾರ್ವಜನಿಕರಿಗೆ ಯಾವುದೇ ಸರಿಯಾದ ಮಾಹಿತಿ ನೀಡದೆ ತರಾತುರಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದೊಂದು ಸಂಪೂರ್ಣ ಅವೈಜ್ಞಾನಿಕ‌ ಕಾಮಗಾರಿಯಾಗಿದ್ದು, ಇದರಿಂದ ಸಾಕಷ್ಟು ಜನರಿಗೆ ತೊಂದರೆ ಆಗಿದೆ. ಮಲ್ಪೆ ಮೀನುಗಾರರಿಗೆ ದೊಡ್ಡಮಟ್ಟದಲ್ಲಿ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಹೆದ್ದಾರಿ ಬಳಕೆದಾರರ ವೇದಿಕೆ ಅಂಬಲಪಾಡಿ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಯಾವುದೇ ನೀಲಾನಕಾಶೆಯನ್ನು ಪ್ರಕಟಿಸದೆ ಏಕಾಏಕಿಯಾಗಿ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ. ಸಂಸದರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜನರಿಗೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡಬೇಕು.

ಯಾವುದೇ ಮುನ್ಸೂಚನೆ ನೀಡಿದೆ ಆರಂಭಿಸಿರುವ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮಲ್ಪೆ- ಮೊಣಕಾಲ್ಮೂರು ರಾ.ಹೆ. ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಮಲ್ಪೆಯ ಮೀನುಗಾರಿಕಾ ಚಟುವಟಿಕೆಗಳು ಬಹುತೇಕವಾಗಿ ಈ ರಸ್ತೆಗಳನ್ನೇ ಅವಲಂಬಿಸಿವೆ. ಹೆದ್ದಾರಿ ಕಾಮಗಾರಿಯಿಂದ ಮಲ್ಪೆ ಮೀನುಗಾರಿಕೆಗೆ ದೊಡ್ಡಮಟ್ಟದ ಪೆಟ್ಟುಬಿದ್ದಿದೆ. ಆದ್ದರಿಂದ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ, ವ್ಯವಸ್ಥಿತ ರೂಪುರೇಷೆಯೊಂದಿಗೆ ಕಾಮಗಾರಿ ಆರಂಭಿಸಬೇಕು. ಪ್ರಸ್ತುತ ನಡೆಯುತ್ತಿರುವ ಮೇಲ್ಸೇತುವೆ ಅಂಡರ್ ಪಾಸ್ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಎಲಿವೇಟೆಡ್ ಫ್ಲೈ ಓವರ್ ನಿರ್ಮಾಣ ಮಾಡಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ಶಿವರಾಮ ಕೋಟ ಮಾತನಾಡಿ, ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಮೇಕಿಂಗ್ ಇಂಡಿಯಾ, ಡಿಜಿಟಲ್ ಇಂಡಿಯಾದ ಕಾಲದಲ್ಲಿ ನಾವು 500 ವರ್ಷ ಮುಂದಿನ ಯೋಜನೆ ಹಾಕಬೇಕು. ಅದರ ಬದಲಾಗಿ ನಾವು ಬಹಳಷ್ಟು ಹಿಂದಕ್ಕೆ ಸರಿದಿದ್ದೇವೆ. ದಂಡೆಯನ್ನು ನಿರ್ಮಿಸಿ ಪೇಟೆಯನ್ನು ಭಾಗ ಮಾಡಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಉದ್ಯಮಿದಾರರಿಗೆ ತೊಂದರೆ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಿದ್ದಾರೆ.
ಯಾವುದೇ ಅಭಿವೃದ್ಧಿ ಕಾರ್ಯದ ವಿರುದ್ಧ ನಮ್ಮ ಹೋರಾಟ ಅಲ್ಲ‌. ಆದರೆ ಉಡುಪಿಯನ್ನು ಭಾಗ ಮಾಡುವುದನ್ನು ಬಿಟ್ಟು, ವೈಜ್ಞಾನಿಕವಾಗಿ ಫಿಲ್ಲರ್ ಗಳನ್ನು ನಿರ್ಮಿಸಿ ಎಲಿವೇಟೆಡ್ ಮಾದರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮೀನುಗಾರ ಮುಖಂಡರಾದ ಕಿಶೋರ್ ಡಿ. ಸುವರ್ಣ, ದಯಾನಂದ್ ಕುಂದರ್, ಜಯಂತ್ ಅಮೀನ್, ರಾಜೇಂದ್ರ ಹಿರಿಯಡಕ, ರಮೇಶ್ ಕೋಟ್ಯಾನ್, ಹರಿಯಪ್ಪ ಕೋಟ್ಯಾನ್, ಮಂಜು ಕೊಳ, ವಿನಯ್ ಕರ್ಕೇರ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here