ಉಡುಪಿ: ಸುಸಜ್ಜಿತವಾದ ಕಚೇರಿ, ಗುಣಮಟ್ಟದ ಪೋನ್, ಸಿಯುಜಿ ಸಿಮ್, ಡೇಟಾ ಸಹಿತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ಏಳು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಎಲ್ಲ ಬಗೆಯ ಮೊಬೈಲ್ ಮತ್ತು ಅಪ್ಲಿಕೇಶನ್ ಸೇವೆಗಳನ್ನು ಸ್ಥಗಿತಗೊಳಿಸಿ ಗುರುವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಉಡುಪಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಉಡುಪಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಇಂದಿನಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಉಡುಪಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಕಾರ್ತಿಕೇಯ ಭಟ್ ಮಾತನಾಡಿ, ಮೊಬೈಲ್ ಅಪ್ಲಿಕೇಶನ್ ಹಾಗೂ ವೆಬ್ ಅಪ್ಲಿಕೇಶನ್ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು. ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಕೆಲಸ ಮಾಡಲು ಒತ್ತಡ ಹೇರಬಾರದು. ಭಡ್ತಿ, ಎಫ್ ಡಿ ಹೆಚ್ಚಳ, ಪತಿ ಪತ್ನಿ ಪ್ರಕರಣ ಮತ್ತು ಅಂತರ್ ಜಿಲ್ಲಾ ವರ್ಗಾವಣೆಗಳ ವಿಚಾರದಲ್ಲಿ ಸರಕಾರ ನಮ್ಮ ಪರ ಇರಬೇಕು. ಸುಸಜ್ಜಿತ ಕಚೇರಿ, ಗುಣಮಟ್ಟದ ಪೋನ್, ಸಿಮ್, ಡೇಟಾ, ಲ್ಯಾಪ್ ಟಾಪ್ ಗಳನ್ನು ನೀಡಬೇಕು. ಇದರಿಂದ ಸರಕಾರದ ಸೇವೆಗಳನ್ನು ಇನ್ನೂ ಉತ್ತಮವಾಗಿ ಸಾರ್ವಜನಿಕರಿಗೆ ನೀಡಲು ಸಾಧ್ಯವಾಗುತ್ತದೆ ಎಂದರು.
ಧರಣಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಡಿ.ಎಚ್., ಉಪಾಧ್ಯಕ್ಷೆ ರೇಷ್ಮಾ, ಹಿರಿಯ ಗ್ರಾಮ ಲೆಕ್ಕಾಧಿಕಾರಿ ಸುಧಾಕರ್, ಗುರುಪ್ರಸಾದ್, ಪುನೀತ್ ಇದ್ದರು.