ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಮೀನಿನ ಲಾರಿಯೊಂದು ಡಿವೈಡರ್ ದಾಟಿ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಉಡುಪಿ ಅಂಬಲಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದೆ.
ಮೀನಿನ ಲಾರಿ ಉಡುಪಿಯಿಂದ ಕೇರಳದ ಕಡೆಗೆ ಸಾಗುತ್ತಿತ್ತು. ಅಂಬಲಪಾಡಿ ಬಳಿ ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ಚಾಲಕ ತಪ್ಪಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಹತ್ತಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೀನಿನ ಲಾರಿಯ ಮುಂಭಾಗಕ್ಕೂ ಹಾನಿಯಾಗಿದೆ. ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಮೀನುಗಳನ್ನು ಬೇರೆ ವಾಹನಕ್ಕೆ ಸ್ಥಳಾಂತರ ಮಾಡಲಾಯಿತು. ಸುದ್ದಿ ತಿಳಿದ ತಕ್ಷಣ ಉಡುಪಿ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.