ಉಡುಪಿ: ಮಲ್ಪೆಯ ಕರಾವಳಿ ಕಲಾವಿದೆರ್ ತಂಡದಿಂದ ಮೂರು ದಿನಗಳ ತುಳು ನಾಟಕೋತ್ಸವ ಇದೇ ಇಂದಿನಿಂದ (ಮೇ 10) ತೊಟ್ಟಂ ಸಾರ್ವಜನಿಕ ಗಣೇಶೋತ್ಸವ ರಂಗಮಂದಿರದಲ್ಲಿ ನಡೆಯಲಿದೆ ಎಂದು ನಾಟಕೋತ್ಸವದ ಸಂಚಾಲಕ ಶೇಖರ್ ಬೈಕಾಡಿ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆ 6ಗಂಟೆಗೆ ಶ್ರೀಕ್ಷೇತ್ರ ಮೂಡುಸಗ್ರಿಯ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲ್ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಕರಾವಳಿ ಕಲಾವಿದೆರ್‌ನ ಅಧ್ಯಕ್ಷ ಹರೀಶ್ ಬಿ.ಕರ್ಕೇರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮೂರು ದಿನಗಳಲ್ಲಿ ರಂಗಭೂಮಿಯ ಮೂವರು ಸಾಧಕರನ್ನು ಸನ್ಮಾನಿಸಲಾಗುವುದು. ಕ್ರಮವಾಗಿ ರಂಗ ನಿರ್ದೇಶಕ ವಿದ್ದು ಉಚ್ಚಿಲ, ರಂಗ ಸಂಘಟಕ ಮಣಿಪಾಲ ಸಂಗಮ ಕಲಾವಿದೆರ್‌ನ ರಾಜು ಮಣಿಪಾಲ ಹಾಗೂ ಖ್ಯಾತ ರಂಗ ನಟ ರಾಜ್‌ಗೋಪಾಲ ಶೇಟ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪ್ರತಿದಿನ ಸಂಜೆ 6:30 ತುಳು ನಾಟಕದ ಪ್ರದರ್ಶನ ನಡೆಯಲಿದೆ. ಇಂದು ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳು ವಿಧೇಯನ್ ಅವರ ‘ಉತ್ಥಾನಪರ್ವ’, 11ರಂದು ಕರಾವಳಿ ಕಲಾವಿದೆರ್ ವಿಜಯ ಆರ್. ಮಾರ್ಪಳ್ಳಿ ನಿರ್ದೇಶನದಲ್ಲಿ ನೂತನ್ ಕುಮಾರ್ ಕೊಡಂಕೂರು ಇವರ ‘ಎನ್ನ ಉಲಾಯಿದಾಲ್’ ಹಾಗೂ 12ರಂದು ಸುಮನಸಾ ಕೊಡವೂರು ತಂಡ ದಿವಾಕರ ಕಟೀಲ್ ನಿರ್ದೇಶನದಲ್ಲಿ ಬಾಲಕೃಷ್ಣ ಶಿಬಾರ್ಲ ಅವರ ‘ಕಾಪ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಹರೀಶ್ ಬಿ.ಕರ್ಕೇರ, ಎಂ.ಕೆ. ವಾಸುದೇವ ಮಾಸ್ತರ್, ಕರುಣಾಕರ್ ಕಾಂಚನ್ ಮಲ್ಪೆ ಉಪಸ್ಥಿತರಿದ್ದರು.