ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2023-24ನೇ ಸಾಲಿನಲ್ಲಿ 921 ಕೋ. ರೂ. ವ್ಯವಹಾರ ನಡೆಸಿ 17.50 ಕೋಟಿ ರೂ. ಲಾಭ ದಾಖಲಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಆಗಿರುವ ಶಾಸಕ ಯಶ್‌ಪಾಲ್ ಎ. ಸುವರ್ಣ ತಿಳಿಸಿದ್ದಾರೆ.
ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟಿರುವ ಬ್ಯಾಂಕ್ ಅವಿಭಜಿತ ದ.ಕ. ಜಿಲ್ಲೆಯಲ್ಲಿ 8 ಶಾಖೆಗಳನ್ನು ಹೊಂದಿದ್ದು 40 ಸಾವಿರ ಗ್ರಾಹಕರ ಮೂಲಕ ವ್ಯವಹಾರ ನಡೆಸುತ್ತಿದೆ. 2023-24ನೇ ಸಾಲಿನಲ್ಲಿ 532 ಕೋ. ರೂ. ಠೇವಣಿ, 389 ಕೋ. ರೂ. ಸಾಲ ಮತ್ತು ಮುಂಗಡದೊಂದಿಗೆ, 34 ಕೋ. ರೂ. ಪಾಲು ಬಂಡವಾಳದೊಂದಿಗೆ ಹಾಗೂ ಶೂನ್ಯ ನಿವ್ವಳ ಅನುತ್ಪಾದಕ ಸಾಲದ ಪ್ರಮಾಣದೊಂದಿಗೆ ಉತ್ತಮ ಪ್ರಗತಿ ಸಾಧಿಸಿದೆ.
ಕಳೆದ 14 ವರ್ಷಗಳಿಂದ ನಿರಂತರವಾಗಿ ಸದಸ್ಯ ಗ್ರಾಹಕರಿಗೆ ಅತೀ ಹೆಚ್ಚು ಡಿವಿಡೆಂಡ್ ನೀಡಿದ ಬ್ಯಾಂಕ್ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ.
ಪ್ರಶಸ್ತಿಗಳು
ಬ್ಯಾಂಕಿನ ಸರ್ವಾಂಗೀಣ ಪ್ರಗತಿಯನ್ನು ಗುರುತಿಸಿ 70ನೇ ಅಖೀಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ವತಿಯಿಂದ ಉಡುಪಿ ಜಿಲ್ಲೆಯ ಉತ್ತಮ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಶಸ್ತಿ, ನ್ಯಾಶನಲ್ ಫೆಡರೇಶನ್ ಆಫ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಂಡ್ ಕ್ರೆಡಿಟ್ ಸೊಸೈಟಿ ಲಿ. ವತಿಯಿಂದ ನೀಡಲ್ಪಡುವ ರಾಷ್ಟ್ರಮಟ್ಟದ ‘ಬೆಸ್ಟ್ ಇನ್‌ವೆಸ್ಟ್‌ಮೆಂಟ್ ಇನೀಶಿಯೇಟಿವ್’ ಅವಾರ್ಡ್ ಹಾಗೂ ಮಹಾರಾಷ್ಟ್ರದ ಅವಿಸ್ ಪಬ್ಲಿಕೇಶನ್ ನೀಡುವ “ಬ್ಯಾಂಕೊ ಬ್ಲೂ ರಿಬ್ಬನ್- 2023′ ಪ್ರಶಸ್ತಿಯನ್ನು ಪಡೆದಿದೆ.
ರಾಜ್ಯದಾದ್ಯಂತ ಶಾಖೆ ಪ್ರಾರಂಭ
ಪ್ರಸ್ತುತ ಬ್ಯಾಂಕಿನ ವ್ಯವಹಾರ ಕ್ಷೇತ್ರ ದ. ಕನ್ನಡ, ಉಡುಪಿ, ಉ. ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಮಂಡ್ಯ ಜಿಲ್ಲೆಯನ್ನು ಒಳಗೊಂಡಿರುತ್ತದೆ. ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ಬ್ಯಾಂಕಿನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಹೊಸ ಶಾಖೆಯನ್ನು ಆರಂಭಿಸಲಿದೆ.
ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ದೊರಕುವ ಎಲ್ಲ ಆಧುನಿಕ ಸೌಲಭ್ಯಗಳು ಲಭ್ಯವಿದ್ದು, ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್ ಸೇವೆ ಸಹಿತ ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ ಅನ್ನು ಅಳವಡಿಸಿಕೊಂಡಿದ್ದು ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ದೃಷ್ಟಿಯಲ್ಲಿ ಅತೀ ಶೀಘ್ರದಲ್ಲಿಯೇ ಯುಪಿಐ ಸೇವೆ ಲಭ್ಯವಾಗಲಿದೆ.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವತಿಯಿಂದ 1,500 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಗಿದೆ. ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ 15 ಸ್ಯಾನಿಟರಿ ನ್ಯಾಪ್ಕಿನ್ ಡಿಸ್ಟ್ರೋಯರ್ ಯಂತ್ರ ವಿತರಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ.
ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ನಿರಂತರ ಪ್ರಗತಿ ಸಾಧಿಸುತ್ತಿರುವ ಬ್ಯಾಂಕ್ ಶೀಘ್ರದಲ್ಲೇ ಐಎಫ್‌ಎಸ್‌ಸಿ ಕೋಡ್ ಹೊಂದುವ ಮೂಲಕ ಕರಾವಳಿ ಭಾಗದ ಪ್ರಪ್ರಥಮ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.