ಉಡುಪಿ: ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭವು ಮಾ.3ರಂದು ಬೆಳಿಗ್ಗೆ 10ಗಂಟೆಗೆ ಚಿಟ್ಪಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್ನ ಲಕ್ಷ್ಮೀ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಕನರಾಡಿ ವಾದಿರಾಜ ಭಟ್ ಹಾಗೂ ಜಾನಪದ ಕಲಾವಿದ ಪ್ರಶಸ್ತಿಗೆ ಹಿರಿಯ ದರ್ಶನ ಪಾತ್ರಿ ಸೂಡ ಕೋಟಿ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಪ್ರಶಸ್ತಿಯು ತಲಾ 12,000 ರೂ. ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಹೊಂದಿದೆ. ಈ ಬಾರಿ ವಿಶೇಷ ಗೌರವ ಸಮ್ಮಾನವನ್ನು ಸಮಾಜಸೇವಕ ಈಶ್ವರ ಮಲ್ಪೆೆ ಅವರಿಗೆ ನೀಡಲಾಗುವುದು. ಪ್ರಶಸ್ತಿ ಪ್ರದಾನವನ್ನು ಪ್ರೊ. ಎಂ.ಎಸ್. ಕೋಟ್ಯಾನ್ ನೆರವೇರಿಸಲಿದ್ದಾರೆ. ಉಪನ್ಯಾಸಕ ಡಾ ದುಗ್ಗಪ್ಪ ಕಜೆಕಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷೆೆ ಅಮಿತಾಂಜಲಿ ಕಿರಣ್, ಯುವವಾಹಿನಿಯ ಮಾಜಿ ಅಧ್ಯಕ್ಷ ರಘುನಾಥ ಮಾಬಿಯನ್ ಇದ್ದರು.