ಉಡುಪಿ: ರಾಮಮಂದಿರ ಅವರದ್ದೂ ಅಲ್ಲ, ನಮ್ದು ಅಲ್ಲ. ಅದು ದೇಶದ 140 ಕೋಟಿ ಜನರಿಗೆ ಸೇರಿದ ಮಂದಿರ ಎಂದು ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವೆ, ನಾನು ಕೂಡ ಭಕ್ತಿ. ರಾಮಮಂದಿರ ನಿರ್ಮಾಣಕ್ಕೆ ನಾನೂ ಕೂಡ ದೇಣಿಗೆ ಕೊಟ್ಟಿದ್ದೇನೆ. ಅಯೋಧ್ಯೆಗೆ ನಾನೂ ಹೋಗುತ್ತೇನೆ. ಯಾವಾಗ ಹೋಗುತ್ತೇನೆ ಎಂಬುದು ಮುಖ್ಯ ಅಲ್ಲ. ರಾಮ, ಕೃಷ್ಣ, ಪರಮಾತ್ಮ ಯಾರೇ ಇರಲಿ ,ನಾನೊಬ್ಬ ಭಕ್ತಿ ಅಷ್ಟೇ. ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದರು. ರಾಮಮಂದಿರ ಕುರಿತ ಪಕ್ಷದ ನಿಲುವಿನ ಬಗ್ಗೆ ಪಕ್ಷದ ಪ್ರಮುಖರ ಜೊತೆ ಕೇಳಿ, ನಾನದಕ್ಕೆ ಉತ್ತರಿಸುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಅತಿಹೆಚ್ಚು ಸ್ಥಾನ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲೀಗ ಬಿಜೆಪಿಯ 25 ಸಂಸದರಿದ್ದರೂ ಕರ್ನಾಟಕದ ಯಾವುದೇ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ. ರಾಜ್ಯದ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ಅನಂತಕುಮಾರ ಹೆಗಡೆಗೆ ತಿರುಗೇಟು
ಕಳೆದ ನಾಲ್ಕೂವರೆ ವರ್ಷಗಳಿಂದ ಸುದ್ದಿಯಲ್ಲಿರದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆಯವರು ಚುನಾವಣೆ ಸಮೀಪಿಸುತ್ತಿರುವಂತೆ ದಿಢೀರ್ ಮುನ್ನೆಲೆಗೆ ಬಂದಿದ್ದಾರೆ. ಅವರಿಗೆ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಯವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದರು.
ಜವಾಬ್ದಾರಿಯಿಲ್ಲದ ಸಂಸದರು
ಬೆಳಗಾವಿಯ ಖಾನಾಪುರ ಕೂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದರೆ, ಈವರೆಗೆ ಒಮ್ಮೆಯೂ ಸಂಸದರು ಭೇಟಿ ನೀಡಿಲ್ಲ. ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಆದರೀಗ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತ ಮುನ್ನಲೆಗೆ ಬರುತ್ತಿದ್ದಾರೆ. ಸಂಸದರಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡುವುದೂ ಮುಖ್ಯ. ಮೊದಲಿನಿಂದಲೂ ಇಂತಹ ಹೇಳಿಕೆಗಳನ್ನು ನೀಡುವುದೇ ಅವರ ಕೆಲಸವಾಗಿದೆ ಎಂದರು.