ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್ ಹಾಗೂ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ನಿಯಮ ಮೀರಿ ಅನಧಿಕೃತ ಕಾರುಬಾರು ನಡೆಸುತ್ತಿರುವ ಬಗ್ಗೆ ಗುಮಾನಿ ಬಂದಿದೆ.
ಸೈಂಟ್ ಮೇರಿಸ್ ದ್ವೀಪ್ ಕ್ಕೆ ರಾತ್ರಿ ವೇಳೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗುತ್ತಿದ್ಯಾ ಎಂಬ ಸಂಶಯವೂ ಮೂಡಿದೆ. ಸೈಂಟ್ ಮೇರಿಸ್ ಗೆ ಬೆಳಿಗ್ಗೆಯಿಂದ ಸಂಜೆ 6:30ರ ವರೆಗೆ ಮಾತ್ರ ಪ್ರವಾಸಿಗರನ್ನು ಕೊಂಡೊಯ್ಯಬಹುದು ಎಂಬ ನಿಯಮವನ್ನು ಜಿಲ್ಲಾಡಳಿತ ರೂಪಿಸಿದೆ. ಆದರೆ ಇತ್ತೀಚಿಗೆ ರಾತ್ರಿ ವೇಳೆ ಕಾನೂನು ಬಾಹಿರವಾಗಿ ಬೋಟ್ ರೈಡ್ ನಡೆಸುತ್ತಿರುವ ಕುರಿತು ಸ್ಥಳೀಯರಿಂದ ದೂರು ಕೇಳಿಬಂದಿದೆ.
ಹವ್ಯಾಸಿ ಡ್ರೋನ್ ಕ್ಯಾಮೆರಾದಲ್ಲಿ ಬೋಟ್ ರೈಡ್ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಇದರಿಂದ ಗುತ್ತಿಗೆ ಪಡೆದವರ ಕಳ್ಳಾಟ ಬಯಲಾಗಿದೆ.
ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರ ಮನೋರಂಜನೆಗಾಗಿ ವಿವಿಧ ಜಲಕ್ರೀಡೆಗಳ ಜೊತೆಗೆ ಬೋಟ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಆದರೆ ಹೆಚ್ಚು ಹಣ ಗಳಿಸುವ ದಾಹದಲ್ಲಿ ಪ್ರವಾಸಿ ಬೋಟ್ ಮಾಲೀಕರು ಅಪಾಯವನ್ನು ಲೆಕ್ಕಿಸದೆ 15-20 ಪ್ರಯಾಣಿಕರ ಜೊತೆ ಸೈಂಟ್ ಮೇರಿಸ್ ಐಲ್ಯಾಂಡ್ ತೆರಳುತ್ತಿದ್ದಾರೆ. ಇತ್ತೀಚಿಗಷ್ಟೆ ಪ್ಯಾರಾಚೂಟ್ ನಿಂದ ಪ್ರವಾಸಿಗನೋರ್ವ ಬಿದ್ದು ಗಾಯಗೊಂಡಿದ್ದನು. ಆದರೂ ಗುತ್ತಿಗೆದಾರರು ಪ್ರವಾಸಿಗರ ಜೊತೆ ಚೆಲ್ಲಾಟ ಆಡುತ್ತಿರುವುದು ಮಾತ್ರ ನಿಂತಿಲ್ಲ. ಹಿಂದೊಮ್ಮೆ ರೇವ್ ಪಾರ್ಟಿ ಮೂಲಕ ಸೈಂಟ್ ಮೇರಿಸ್ ದ್ವೀಪ ಸುದ್ದಿಯಾಗಿತ್ತು