Home ವಿಶೇಷ ಉಡುಪಿ: ವಿಶ್ವ ಬಂಟರ ಸಮ್ಮೇಳನದ ಬೃಹತ್ ಮೆರವಣಿಗೆಗೆ ಚಾಲನೆ

ಉಡುಪಿ: ವಿಶ್ವ ಬಂಟರ ಸಮ್ಮೇಳನದ ಬೃಹತ್ ಮೆರವಣಿಗೆಗೆ ಚಾಲನೆ

ಉಡುಪಿ: ಜಾಗತಿಕ ಬಂಟರ ಒಕ್ಕೂಟದ ವತಿಯಿಂದ ಆಯೋಜಿಸಿರುವ ವಿಶ್ವ ಬಂಟರ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಉಡುಪಿ ಬೋರ್ಡ್ ಹೈಸ್ಕೂಲ್ ಮುಂಭಾಗದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಬಾರ್ಕೂರು ಭಾರ್ಗವ ಮಹಾಸಂಸ್ಥಾನದ ವಿಶ್ವ ಸಂತೋಷ್ ಭಾರತಿ ಸ್ವಾಮೀಜಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು.

ಬೋರ್ಡ್ ಹೈಸ್ಕೂಲ್‌ನಿಂದ ಕೆ.ಎಂ ಮಾರ್ಗ, ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಸಾಗಿದ ಮೆರವಣಿಗೆ ಬಂಟರ ಕ್ರೀಡೋತ್ಸವ ನಡೆಯುವ ಜಿಲ್ಲಾ ಕ್ರೀಡಾಂಗಣ ತಲುಪಿತು.

ಮೆರವಣಿಗೆಯಲ್ಲಿ ನಾಡಿನ 60ಕ್ಕೂ ಹೆಚ್ಚು ಬಂಟರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮುದಾಯದ ನೂರಾರು ಕ್ರೀಡಾಪಟುಗಳು ಇದ್ದರು. ಸುಮಾರು ಒಂದು ಕಿ.ಮೀಗೂ ಉದ್ದದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಬಂಟರ ಸಾಂಸ್ಕೃತಿಕ ವೈಭೋಗಕ್ಕೆ ಮೆರವಣಿಗೆ ಸಾಕ್ಷಿಯಾಯಿತು. ಕಂಬಳದ ಕೋಣಗಳನ್ನು ಹಿಡಿದು ಸಾಗಿದ ಕಂಬಳ ಓಟಗಾರರು ಗಮನ ಸೆಳೆದರು. ಕಡೆಗೋಲು ಕೃಷ್ಣ, ಕಟೀಲು ದುರ್ಗಾ ಪರಮೇಶ್ವರಿ ದೇವರ ಸ್ಥಬ್ಧಚಿತ್ರಗಳು, ಚಂಡೆ, ಕೀಲುಕುದುರೆ, ಕೇರಳದ ತೈಯಂ, ಹುಲಿವೇಷ, ಬ್ಯಾಂಡ್ ಸೆಟ್, ಡೋಲು, ವಾದ್ಯ, ನಾದಸ್ವರ, ವೇಷಧಾರಿಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು.
ಕ್ರೀಡಾಂಗಣದಲ್ಲಿ ಬಂಟರ ಸಮುದಾಯದ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

Exit mobile version