ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ಉರುಳಿಬಿದ್ದ ಪರಿಣಾಮ ಉದ್ಯಮಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಪಡುಬಿದ್ರಿ ರಾ.ಹೆ.66 ರಲ್ಲಿ ಡಿ.10ರಂದು ತಡರಾತ್ರಿ 2 ಗಂಟೆಯ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ನಡೆದಿದೆ.
ಮೃತರನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಮಾಲಿಕ ಅಭಿಷೇಕ್ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರನ್ನು ಅವರೇ ಚಲಾಯಿಸುತ್ತಿದ್ದು, ಸಹಪ್ರಯಾಣಿಕರು ಯಾರೂ ಇರಲಿಲ್ಲ. ಹಿಂದಿನ ವಾಹನಗಳಲ್ಲಿ ಅವರ ಗೆಳೆಯರು ಇದ್ದರು ಎಂದು ತಿಳಿದು ಬಂದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಧರಾಶಾಯಿಯಾಗಿ, ಕಾರು ನಜ್ಜುಗುಜ್ಜಾಗಿದೆ. ಈ ಸಂದರ್ಭ ವಿದ್ಯುತ್ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಕೂಡಲೇ ಅಭಿಯವರನ್ನು ಸ್ಥಳೀಯರ ಸಹಕಾರದಿಂದ ಆತನ ಸ್ನೇಹಿತರು ಮುಕ್ಕದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದಾರೆಂದು ತಿಳಿದು ಬಂದಿದೆ. ಶ್ರಮ ಜೀವಿಯಾಗಿದ್ದ ಅಭಿ ಕಷ್ಟದಿಂದ ಮೇಲೆ ಬಂದು ತನ್ನದೇ ಇವೆಂಟ್ ತಂಡ ಕಟ್ಟಿಕೊಂಡಿದ್ದರು. ಘಟನಾ ಸ್ಥಳಕ್ಕೆ ಹೆಜಮಾಡಿ ಟೋಲ್ ಸಿಬ್ಬಂದಿ ಮತ್ತು ಪಡುಬಿದ್ರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
