Home ರಾಜ್ಯ ಭಗವದ್ಗೀತೆ ನೀತಿಪರ ಜೀವನಕ್ಕೆ ಮಾರ್ಗದರ್ಶನ ನೀಡುವ ಗ್ರಂಥ- ಪವನ್ ಕಲ್ಯಾಣ್

ಭಗವದ್ಗೀತೆ ನೀತಿಪರ ಜೀವನಕ್ಕೆ ಮಾರ್ಗದರ್ಶನ ನೀಡುವ ಗ್ರಂಥ- ಪವನ್ ಕಲ್ಯಾಣ್

ಉಡುಪಿ: ಮಧ್ವಾಚಾರ್ಯರಂತಹ ಮಹಾನ್ ಚಿಂತಕರು ಬೌದ್ಧಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ನೀಡಿದ್ದಾರೆ. ಭಗವದ್ಗೀತೆ ಕೇವಲ ಆಚರಣೆಯ ಗ್ರಂಥವಲ್ಲ, ನೀತಿಪರ ಜೀವನಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದೆ. ಸನಾತನ ಧರ್ಮದ ಶಕ್ತಿ ವೇದಗಳಲ್ಲಿ ಹಾಗೂ ಗೀತೆಯ ಶಾಶ್ವತ ಜ್ಞಾನದಲ್ಲಿ ಅಡಕವಾಗಿದೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಹೇಳಿದ್ದಾರೆ. ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ರಾಜಾಂಗಣದಲ್ಲಿ ನಡೆದ ಬೃಹತ್ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಡುಪಿ ದೇಶದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಮಧ್ವಾಚಾರ್ಯರ ದ್ವೈತ ತತ್ವಶಾಸ್ತ್ರದಿಂದ ಉಡುಪಿ ಮಹಿಮೆಯು ಹೆಚ್ಚಾಗಿದೆ. ಹಿಂದು ಧರ್ಮದ ಪ್ರಚಾರವನ್ನು ದೇಶದ ಗಡಿ ದಾಟಿಸಿ ವಿಸ್ತರಿಸಿರುವ ಸುಗುಣೇಂದ್ರ ತೀರ್ಥ ಸ್ವಾಮೀಜಿಯ ಕಾರ್ಯ ಶ್ಲಾಘನೀಯ ಎಂದರು.
ಇಂಗ್ಲಿಷ್ ಭಾಷೆ ಭಾರತೀಯ ಸಮಾಜವನ್ನು ನಾಶಮಾಡಬಹುದು ಎಂಬ ಕಲ್ಪನೆ ತಪ್ಪು. ಏಕೆಂದರೆ ಭಾರತವು ಇಂಗ್ಲಿಷರ ಆಡಳಿತವನ್ನೇ ಪತನಗೊಳಿಸಿದೆ. ವಿದೇಶಿ ಸಂಸ್ಕೃತಿಯನ್ನು ಬಲವಂತವಾಗಿ ಹೇರಲು ಮಾಡಿದ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಗೋ ಸಂರಕ್ಷಣೆ ಎಂಬುದು ಧರ್ಮ ಮತ್ತು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ಸಹಾಯದಿಂದ ಗೋಶಾಲೆಗಳ ನಿರ್ಮಾಣ ಮಾಡಬೇಕು. ಪ್ರತಿಯೊಂದು ಹಿಂದೂಗಳು ತಮ್ಮ ಮನೆಗಳಲ್ಲಿ ಕನಿಷ್ಟ ಒಂದು ಹಸುವನ್ನು ಸಾಕಬೇಕು. ಇತರ ಸಮುದಾಯಗಳತ್ತ ಬೆರಳು ತೋರಿಸುವ ಮೊದಲು ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಅವರು ತಿಳಿಸಿದರು.
ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮಾಯಾಪುರಿ ಶ್ರೀಸುಭಾಗ ಸ್ವಾಮಿ ಗುರುಮಹಾರಾಜ್, ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶೀಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಟಿಟಿಡಿ ಬೋರ್ಡ್ ಸದಸ್ಯರಾದ ಬಿ.ಆನಂದ ಸಾಯಿ, ನರೇಶ್ ಕುಮಾರ್, ಉದ್ಯಮಿಗಳಾದ ರಾಘವೇಂದ್ರ ರಾವ್, ಮುರಳಿ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು. ಡಾ.ವಿಜಯೇಂದ್ರ ಸ್ವಾಗತಿಸಿದರು. ಗೋವಿಂದಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Exit mobile version