ಉಡುಪಿ: ಕಿದಿಯೂರು ಎಜುಕೇಶನ್ ಟ್ರಸ್ಟ್ ವತಿಯಿಂದ ನಿಟ್ಟೂರಿನ ಕಿದಿಯೂರ‌್ಸ್ ಲಾರ್ಡ್ಸ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಆಶ್ರಯ ಹಾಗೂ ಹೈದರಾಬಾದಿನ ಆರ್‌ಜಿಎಫ್ ಸಂಸ್ಥೆ ಸಹಯೋಗದಲ್ಲಿ 2025- 26ನೇ ಸಾಲಿಗಾಗಿ ಪ್ರತಿಭಾನ್ವೇಷಣೆ: ವಿದ್ಯಾರ್ಥಿ ವೇತನ ಪರೀಕ್ಷೆ ಡಿ.21ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ ಎಂದು ಕಿದಿಯೂರು ಹೋಟೆಲ್‌ನ ಮಾಲೀಕ ಭುವನೇಂದ್ರ ಕಿದಿಯೂರು ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯಾವುದೇ ಶಾಲೆಯ, ಯಾವುದೇ ಪಠ್ಯಕ್ರಮದ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಿದ್ದು, ಪ್ರತಿ ತರಗತಿಯಿಂದ 10 ಟಾಪರ್ ಗಳನ್ನು ಆಯ್ಕೆ ಮಾಡಲಾಗುವುದು. ಉಡುಪಿ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳಿಗಾಗಿ ಕಿದಿಯೂರು ಹೋಟೆಲ್ ನ ಅನಂತಶಯನ ಸಭಾಂಗಣದಲ್ಲಿ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಯಲಿದ್ದು, ಹೆಸರು ನೋಂದಣಿ ಮಾಡಬಹುದು ಅಥವಾ ನೇರವಾಗಿ ಪರೀಕ್ಷೆಗೆ ಹಾಜರಾಗಬಹುದು. 3,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ ಎಂದರು.
ಹೈದರಾಬಾದ್ ಆರ್‌ಜಿಎಫ್ ಸಂಸ್ಥೆಯ ರವೀಂದ್ರ ನಾಯ್ಡು ಮಾತನಾಡಿ, ಮಕ್ಕಳ ಹೆತ್ತವರು, ಪೋಷಕರಿಗೆ ಸಮಯ ನಿರ್ವಹಣೆ ಹಾಗೂ ಮಕ್ಕಳ ಪಾಲನೆ ಕೌಶಲ್ಯದ ಅರಿವು ಕಾರ್ಯಕ್ರಮ ನಡೆಯಲಿದೆ. ಪರೀಕ್ಷೆ ಮುಗಿದ ದಿನವೇ ಟಾಪರ್ಸ್‌ಗಳನ್ನು ಘೋಷಿಸಲಾಗುವುದು.
ಟಾಪರ್‌ಗಳು ರಿಯಾಯಿತಿ ಶುಲ್ಕದಲ್ಲಿ ಕಿದಿಯೂರ‌್ಸ್ ಲಾರ್ಡ್ಸ್ ಇಂಟರ್ ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಸೇರುವ ಅವಕಾಶವಿದೆ. ಕಿದಿಯೂರ್ಸ್ ಸ್ಕೂಲ್‌ನಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪಾರ್ಕ್ ಕಾರ್ಯಕ್ರಮ ಹಾಗೂ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಇಂಟಿಗ್ರೇಟೆಡ್ ಫೌಂಡೇಶನ್ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನವೀನ್ ಶೆಟ್ಟಿ, ವಿಲಾಸ್ ಕುಮಾರ್, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.
