Home ಕರಾವಳಿ ಬೈಂದೂರು ಪ.ಪಂ. ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡಲು ರೈತರ ಆಗ್ರಹ: ನಾಳೆ (ಸೆ.19) ಜಿಲ್ಲಾಧಿಕಾರಿ ಕಚೇರಿ...

ಬೈಂದೂರು ಪ.ಪಂ. ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡಲು ರೈತರ ಆಗ್ರಹ: ನಾಳೆ (ಸೆ.19) ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ

ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರಿಸಿರುವುದರಿಂದ ಕೃಷಿಕರು ಪ್ರತಿದಿನ ಪರದಾಡುವಂತಾಗಿದೆ. ಆದ್ದರಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ನಾಳೆ (ಸೆ.19) ಬೆಳಿಗ್ಗೆ 10ಗಂಟೆಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾ‌ರ್ ಶೆಟ್ಟಿ ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ವ್ಯಾಪ್ತಿಯ ಸುತ್ತ ಮುತ್ತ ಹತ್ತಾರು ಕುಗ್ರಾಮಗಳಿವೆ. ಕೃಷಿಯೇ ಇಲ್ಲಿನ ಜನರ ಜೀವನಾಧಾರ. ಅಭಿವೃದ್ಧಿಯ ಹೆಸರಿನಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಈ ಹಳ್ಳಿಗಳನ್ನು ಸೇರ್ಪಡೆಗೊಳಿಸಿರುವುದು ಸರಿಯಲ್ಲ. 23 ಕಿ.ಮೀ ವ್ಯಾಪ್ತಿ ಬಹುತೇಕ ಭಾಗ ಅರಣ್ಯ ಭಾಗದಿಂದ ಕೂಡಿದೆ. ರೈತರು ಸಣ್ಣ ಪುಟ್ಟ ಕೆಲಸಕ್ಕೂ ಉಡುಪಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಅಕ್ರಮ ಸಕ್ರಮ ಗ್ರಾಮೀಣ ಕ್ರಪಾಂಗ ಸೌಲಭ್ಯ ಕೂಡ ದೊರೆಯುತ್ತಿಲ್ಲ. ಈಗಾಗಲೆ ಸಾವಿರಾರು ರೈತರಿಗೆ ಸಮಸ್ಯೆ ಆಗುವ ಈ ನಿರ್ಧಾರವನ್ನು ಬದಲಿಸಬೇಕೆಂದು ಹಲವು ಬಾರಿ ಮನವಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದರು.
ಆದ್ದರಿಂದ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೊಂದಿರುವ ಭೂ ಭಾಗ ಮತ್ತು ಹೇರಳ ಜನ ವಸತಿ ಇರುವಂತಹ ಪ್ರದೇಶಕ್ಕೆ ಸೀಮಿತಗೊಳಿಸಿ, ಅಂದಾಜು 11.98 ಚದರ ಕಿಲೋ ಮೀಟರ್ ಸುತ್ತಳತೆಯ ಭೂ ಪ್ರದೇಶಗಳನ್ನು ಮಾತ್ರ ಉಳಿಸಿಕೊಂಡು ಅತೀ ಹಿಂದುಳಿದ ಮೇಲೆ ಸೂಚಿಸಿದ ಪ್ರದೇಶವನ್ನು ವಿಭಜನೆಯೊಂದಿಗೆ ಮಾರ್ಪಾಡು ಮಾಡಿ ಹಿಂದುಳಿದ ಭೂ-ಭಾಗಗಳನ್ನು ಗ್ರಾಮ ಪಂಚಾಯತಿ ಪ್ರದೇಶಗಳನ್ನಾಗಿ ಪರಿಷ್ಕರಿಸಬೇಕು. ಹಾಗೆಯೇ ಅಭಿವೃದ್ಧಿ ಹೊಂದಿರುವ ಬೈಂದೂರು ಹೃದಯ ಭಾಗದ ಭೂ ಪ್ರದೇಶಗಳನ್ನು ಪಟ್ಟಣ ಪಂಚಾತಿಯನ್ನಾಗಿ ಪುನರ್ ಪರಿಷ್ಕರಿಸಿ ಪರಿವರ್ತಿಸಬೇಕು. ಆಗ ಸರಕಾರದ ನಗರ ಪರಿಕಲ್ಪನೆ ಸಾಕಾರಗೊಳ್ಳಲು ಮತ್ತು ಅಭಿವೃದ್ಧಿಗೆ ನೀಡುವ ಅನುದಾನ ಸಮರ್ಪಕ ಸದ್ಬಳಕೆಯಿಂದ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Exit mobile version