Home ಕರಾವಳಿ ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಬಸ್; ಓರ್ವ ಮೃತ್ಯು, ಐವರು ಗಂಭೀರ

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಬಸ್; ಓರ್ವ ಮೃತ್ಯು, ಐವರು ಗಂಭೀರ

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿದ ಬಸ್ ವೊಂದು ಕಿರುಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿಬಿದ್ದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, 18 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಸುಕಿನ 3 ಗಂಟೆ ಸುಮಾರಿಗೆ ಸಂಭವಿಸಿದೆ. ಗಾಯಗೊಂಡವರ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬೆಳಗಾವಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ವೀಪ‌ರ್ ಬಸ್ ಅಗಸೂರು ಬಳಿ ಇರುವ ಜಗದೀಶ ಡಾಬಾ ಎದುರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದಿದೆ. ಅಪಘಾತದ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ನಿದ್ರೆಯಲ್ಲಿದ್ದು, ಬಸ್ ಕುಸಿದು ಬಿದ್ದ ಶಬ್ದಕ್ಕೆ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಮತ್ತು ಅಂಕೋಲಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಾಗೇ ಬಸ್‌ ಮೇಲಕ್ಕೆತ್ತುವ ಸಂದರ್ಭದಲ್ಲಿ ಬಸ್ಸಲ್ಲಿ ಸಿಲುಕಿಕೊಂಡಿದ್ದ ಓರ್ವನ ಮೃತದೇಹ ಹೊರತೆಗೆಯಲಾಯಿತು. ಅದೇ ರೀತಿ ಗಾಯಾಳುಗಳನ್ನು ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version