Home ಅಪರಾಧ ಮಣಿಪಾಲ: ತಾಯಿಯ ಕತ್ತು ಹಿಸುಕಿ ಕೊಂದ ಮಗ: ಆರೋಪಿಯ ಬಂಧನ

ಮಣಿಪಾಲ: ತಾಯಿಯ ಕತ್ತು ಹಿಸುಕಿ ಕೊಂದ ಮಗ: ಆರೋಪಿಯ ಬಂಧನ

ಉಡುಪಿ: ಹಣಕ್ಕಾಗಿ ಮಗನೋರ್ವ ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪದ್ಮಾಬಾಯಿ(45) ಕೊಲೆಯಾದ ಮಹಿಳೆ‌. ಮೃತರ ಮಗ ಈಶ ನಾಯಕ್(26) ಕೊಲೆ ಆರೋಪಿ. ಜೂ.18ರಂದು ರಾತ್ರಿ ಪದ್ಮಾಬಾಯಿ ಸೊಂಟ ನೋವಿನಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಂದು ರಾತ್ರಿ ಪದ್ಮಾಬಾಯಿ ಅವರ ತಂಗಿ ಶಿಲ್ಪಾ ಎಂಬವರಿಗೆ ಕರೆ ಮಾಡಿದ ಈಶ ನಾಯಕ್, ತಾಯಿಗೆ ಸೌಖ್ಯವಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಕಳುಹಿಸುವಂತೆ ತಿಳಿಸಿದ್ದನು. ಅದರಂತೆ ಶಿಲ್ಪಾ ಆನ್ಲೈನ್ ಮೂಲಕ ಹಣ ಕಳುಹಿಸಿದ್ದರು. ಜೂ.19ರಂದು ಬೆಳಗ್ಗೆ ಶಿಲ್ಪಾರಿಗೆ ಕರೆ ಮಾಡಿದ ಈಶಾ, ತಾಯಿ ಬೆಳಿಗ್ಗೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದನು.
ಹಾಗೆ ಶಿಲ್ಪಾ ಆಸ್ಪತ್ರೆಗೆ ಬಂದು ನೋಡಿದಾಗ ಪದ್ಮಬಾಯಿ ಅವರ ಕುತ್ತಿಗೆ ಬಳಿ ಕೆಂಪಾಗಿದ್ದು ಕುತ್ತಿಗೆಯನ್ನು ಒತ್ತಿದ ರೀತಿ ಕಂಡುಬಂದಿದೆ. ಅವರ ಮರಣದಲ್ಲಿ ಸಂಶಯ ಇರುವುದಾಗಿ ಶಿಲ್ಪಾ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೂ.21ರಂದು ಮಣಿಪಾಲ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರು ನೀಡಿದ ವರದಿಯಲ್ಲಿ ಪದ್ಮಾಬಾಯಿ ಅವರನ್ನು ಯಾರೋ ದುಷ್ಕರ್ಮಿಗಳು ಜೂ.18ರಂದು ರಾತ್ರಿಯಿಂದ ಜೂ.19ರ ಬೆಳಗಿನ ನಡುವೆ ಕೊಲೆ ಮಾಡಿರುವುದಾಗಿ ದೃಢಪಟ್ಟಿದೆ. ಅದರಂತೆ ಮಣಿಪಾಲ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.
ನಂತರದ ತನಿಖೆಯಲ್ಲಿ ಪದ್ಮಾಬಾಯಿ ಅವರನ್ನು ಅವರ ಮಗ ಈಶ ನಾಯ್ಕ್ ಹಣಕ್ಕಾಗಿ ಹಾಗೂ ಕೌಟುಂಬಿಕ ಕಲಹದಿಂದ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಅದರಂತೆ ಪೊಲೀಸರು ಆರೋಪಿ ಈಶ ನಾಯಕ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Exit mobile version