Home ಕರಾವಳಿ ಜ.30ರಂದು ಹಿರಿಯಡಕದಲ್ಲಿ “ಗಾಂಧಿ ಭಾರತ ಬೃಹತ್ ಸಮಾವೇಶ”

ಜ.30ರಂದು ಹಿರಿಯಡಕದಲ್ಲಿ “ಗಾಂಧಿ ಭಾರತ ಬೃಹತ್ ಸಮಾವೇಶ”

ಉಡುಪಿ: 100 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿ ಭಾಗವಹಿಸಿದ್ದ ಸವಿನೆನಪಿಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಕಾಪು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಹಯೋಗದೊಂದಿಗೆ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಧ್ಯೇಯವಾಕ್ಯದಡಿ “ಗಾಂಧಿ ಭಾರತ ಬೃಹತ್ ಸಮಾವೇಶ”ವನ್ನು ಜ. 30ರಂದು ಹಿರಿಯಡಕದ ಶ್ರೀ ವೀರಭದ್ರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 3ಗಂಟೆಗೆ ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಜಯಂತ ರಾವ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಉಮಾಶ್ರೀ, ವಕ್ತಾರ ನಿಕೇತ್ ರಾಜ್ ಮೌರ್ಯ, ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಸುಧೀರ್ ಮರೋಳಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುಮಾರು 5 ಸಾವಿರ ಮಂದಿ ಸೇರುವ ನಿರೀಕ್ಷೆ ಇದ್ದು, ಸಭಾಕಾರ್ಯಕ್ರಮಕ್ಕೂ ಮೊದಲು ದೇವಾಡಿಗ ಸಭಾಭವನದಿಂದ ಸಮಾವೇಶ ಸ್ಥಳದವರೆಗೆ ಮೆರವಣಿಗೆ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಸಮಾವೇಶದ ಸಂಚಾಲಕ ನಾಗೇಶ ಉದ್ಯಾವರ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ನಿತಿನ್ ಮತ್ತು ನವೀನ ಚಂದ್ರ ಸುವರ್ಣ ಇದ್ದರು.

Exit mobile version