ಉಡುಪಿ: ಬೇರೆ ಬೇರೆ ಜಿಲ್ಲೆಗಳಲ್ಲಿ ಆಹಾರ ಪದಾರ್ಥಗಳಲ್ಲಿಯೂ ಡ್ರಗ್ಸ್ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಪ್ರತಿ ತಿಂಗಳು 50 ಅಂಗಡಿ ಒಳಗೊಂಡಂತೆ ರ‌್ಯಾಂಡಮ್ ಟೆಸ್ಟ್ ಮಾಡುವಂತೆ ಡಿಎಚ್ ಒ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಉಡುಪಿ ಪತ್ರಿಕಾ ಭವನದಲ್ಲಿ ಇಂದು ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳಿಗೆ ಡ್ರಗ್ಸ್ ಟೆಸ್ಟ್ ಮಾಡುವ ಕಿಟ್ ಅನ್ನು ಒದಗಿಸಲಾಗಿದೆ. ಅದರಂತೆ ಅಧಿಕಾರಿಗಳು ಆಹಾರ ಪದಾರ್ಥಗಳಲ್ಲಿ ಡ್ರಗ್ಸ್ ಅಂಶ ಇದೆಯೇ ಎಂಬುವುದನ್ನು ಪರೀಕ್ಷೆ ನಡೆಸುತ್ತಿದ್ದು, ಈವರೆಗೆ ಅಂತಹ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದರು.
ಗಾಂಜಾ ಬೆಳೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಅರಣ್ಯ ಇಲಾಖೆಗೂ ಸರ್ವೇ ನಡೆಸುವಂತೆ ತಿಳಿಸಲಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿಯೂ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವ ಬಗ್ಗೆ ದೂರು ಬಂದಲ್ಲಿ ತಕ್ಷಣ ಕ್ರಮಕೈಗೊಳ್ಳುತ್ತೇವೆ. ಪ್ರತಿದಿನ ಅಂಗಡಿ, ಗೂಡಾಂಗಡಿಗಳಿಗೆ ಹೋಗುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡುವಂತೆ ಈಗಾಗಲೇ ಕಾಲೇಜಿನ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದೇವೆ. ಅಲ್ಲದೆ, ತರಗತಿಗಳಿಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಅವರ ಪೋಷಕರಿಗೆ ತಿಳಿಸುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಮಕ್ಕಳ ಬಗ್ಗೆ ಹೆತ್ತವರು ಹೆಚ್ಚು ನಿಗಾ ವಹಿಸಬೇಕು. ಹೆಚ್ಚೆಚ್ಚು ಹಣ ಕೇಳಿದ್ರೆ ಅದು ಯಾವುದಕ್ಕೆ ಎಂಬುವುದನ್ನು ಪ್ರಶ್ನಿಸಬೇಕು. ಮಕ್ಕಳ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಬೇಕು ಎಂದು ಸಲಹೆ ನೀಡಿದರು.