ಉಡುಪಿ: ಕನಿಷ್ಠ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ‘ಸಂಜೀವಿನಿ’ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪುಸ್ತಕ ಬರಹಗಾರರು (ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ(ಎಲ್‌ಸಿಆರ್‌ಪಿ) ಗಳು ನ.20ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಗ್ರಾಪಂ ಮಟ್ಟದ ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಮಹಾಒಕ್ಕೂಟದ ಕುಂದಾಪುರ ಘಟಕದ ಅಧ್ಯಕ್ಷೆ ವಸಂತಿ ತಿಳಿಸಿದರು.
ಉಡುಪಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 155 ಗ್ರಾಪಂಗಳ ವ್ಯಾಪ್ತಿಯಲ್ಲಿ 155 ಎಂಬಿಕೆ ಮತ್ತು 465 ಎಲ್‌ಸಿಆರ್‌ಪಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಎಂಬಿಕೆಗಳಿಗೆ 5000ರೂ. ಮತ್ತು ಎಲ್‌ಸಿಆರ್‌ಪಿಗಳಿಗೆ 2500ರೂ. ಗೌರವಧನ ನೀಡಲಾಗುತ್ತಿದೆ. ಆದರೆ ನಮಗೆ ಈ ವೇತನ ಸಾಕಾಗುವುದಿಲ್ಲ. ಆದ್ದರಿಂದ ಗೌರವ ಧನದ ಬದಲು ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಹುದ್ದೆಯನ್ನು ಖಾಯಂಗೊಳಿಸಿ 3ವರ್ಷದ ನಂತರ ಸರಕಾರವೇ ವೇತನ ಭರಿಸಬೇಕು. ಎಂಬಿಕೆಗಳಿಗೆ 20000ರೂ. ಮತ್ತು ಎಲ್‌ಸಿಆರ್‌ಪಿಗಳಿಗೆ 15ಸಾವಿರ ರೂ. ವೇತನವನ್ನು ಪ್ರಯಾಣ ಭತ್ಯೆ ಜೊತೆ ನೀಡಬೇಕು. ಇಎಸ್‌ಐ ಮತ್ತು ಪಿಎಫ್ ಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಂದಾಪುರ ತಾಲೂಕು ಕಾರ್ಯದರ್ಶಿ ಸುಚಿತ್ರಾ, ಕೋಶಾಧಿಕಾರಿ ಪ್ರಮೀಳಾ, ಹೆಬ್ರಿ ತಾಲೂಕು ಅಧ್ಯಕ್ಷೆ ಪಿ.ಸುಜಾತ, ಉಡುಪಿ ತಾಲೂಕು ಅಧ್ಯಕ್ಷೆ ಸುಜಾತ ಉಪಸ್ಥಿತರಿದ್ದರು