ಉಡುಪಿ: ಬೆಂಗಳೂರಿನಲ್ಲಿ ಕೋಟಿ ಕೋಟಿ ಹಣ ಸಿಕ್ಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು, ಬೆಂಗಳೂರಿನಲ್ಲಿ 42 ಕೋಟಿ ಪತ್ತೆಯಾಗಿರುವುದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ದಾರಿಯಲ್ಲಿ ಹಣ ಸಿಕ್ಕಿದ್ದಕ್ಕೆ ಯಾರೆಲ್ಲಾ ಈವರೆಗೆ ರಾಜೀನಾಮೆ ಕೊಟ್ಟಿದ್ದಾರೆ. ಯಾರದ್ದೋ ಮನೆಯಲ್ಲಿ ದುಡ್ಡು ಸಿಕ್ಕರೆ, ಕಾಂಗ್ರೆಸ್ ನವರು ರಾಜೀನಾಮೆ ಕೊಡೋದಿಕ್ಕೆ ಆಗುತ್ತಾ. ನಳಿನ್ ಕುಮಾರ್ ಕಟೀಲ್ ಗೆ ಮಾತನಾಡುವುದೇ ಚಪಲ. ದುಡ್ಡು ಯಾರದ್ದು ಎಂದು ತನಿಖೆ ಆಗುತ್ತದೆ, ಅವರ ಮೇಲೆ ಕ್ರಮ ಆಗುತ್ತದೆ ಎಂದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಯಾರ್ಯಾರದ್ದು ಎಷ್ಟೆಷ್ಟು ದುಡ್ಡು ಎಲ್ಲೆಲ್ಲಿತ್ತು ಎಂಬ ಬಗ್ಗೆ ಗೊತ್ತಿದೆ. ದುಡ್ಡು ಸಿಕ್ಕ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ?. ಮುಖ್ಯಮಂತ್ರಿ ಅಥವಾ ಮಂತ್ರಿಗೆ ಸಂಬಂಧ ಇದೆ ಎಂದು ದಾಖಲೆ ಕೊಡಲಿ ಆಮೇಲೆ ಆರೋಪ ಮಾಡಲಿ ಎಂದರು.
ಬಿಜೆಪಿ ನಾಯಕರು ನಾಲಗೆಗೆ ಹಿಡಿತ ಇಲ್ಲದೆ ಮಾತನಾಡುತ್ತಾರೆ. ಈಶ್ವರಪ್ಪನ ಮಾತಿಗೆ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ. ಈಶ್ವರಪ್ಪ ಮತ್ತು ಕಟೀಲ್ ಅಣ್ಣತಮ್ಮಂದಿರು, ಆ ಇಬ್ಬರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. ಬೆಳಿಗ್ಗೆದ್ದು ಅವರಿಗೆ ಟಿವಿ ಮುಂದೆ ಮಾತನಾಡುವುದೇ ಕೆಲಸ. ಮಾಡಳ್ ವಿರೂಪಾಕ್ಷ ಪ್ರಕರಣದಲ್ಲಿ ಬೊಮ್ಮಾಯಿ ರಾಜೀನಾಮೆ ಕೊಟ್ಟೇ ಇಲ್ಲ ಯಾಕೆ?. ಬಿಜೆಪಿ ಕಂಗಾಲಾಗಿದೆ ಚುನಾವಣೆ ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಏನೇ ಸಮಸ್ಯೆ ಇದ್ದರೂ ಕಾಂಗ್ರೆಸ್ ಸರ್ಕಾರ ನಿಭಾಯಿಸುತ್ತಿದೆ ಎಂದು ಹೇಳಿದ್ರು.