Sunday, November 24, 2024

ತನ್ನ ಸ್ವಾರ್ಥಕ್ಕಾಗಿ ಹಿಂದೂಗಳ ಭಾವನೆಗಳೊಂದಿಗೆ ಸುನೀಲ್ ಕುಮಾರ್ ಚೆಲ್ಲಾಟ: ರಮೇಶ್ ಕಾಂಚನ್ ಆಕ್ರೋಶ

Must read

ಉಡುಪಿ: ಬೈಲೂರು ಉಮಿಕಲ್ ಬೆಟ್ಟದ ಮೇಲೆ ಕಾರ್ಕಳ‌ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಪರುಶುರಾಮನ ನಕಲಿ ಮೂರ್ತಿಯನ್ನು ನಿರ್ಮಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆಯನ್ನುಂಟು ಮಾಡಿದ್ದಾರೆ. ಇದೀಗ ನಕಲಿ ಮೂರ್ತಿಯನ್ನು ತೆರವುಗೊಳಿಸಿ ಹೊಸ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪಿಸುವ ಕೆಲಸ ಆರಂಭಿಸಿದ್ದಾರೆ. ಇದು ಮುಂಬರುವ ಚುನಾವಣೆಯಲ್ಲಿ ಮತಪಡೆಯಲು ಮಾಡಿರುವ ಹುನ್ನಾರ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆರೋಪಿಸಿದ್ದಾರೆ.

1.58 ಎಕ್ರೆ ಗೋಮಾಳದಲ್ಲಿ ಅಕ್ರಮವಾಗಿ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿ ಚುನಾವಣೆ ಉದ್ದೇಶದಿಂದ ಅವಸರದಲ್ಲಿ ಥೀಮ್ ಪಾರ್ಕ್ ಅನ್ನು ಉದ್ಘಾಟಿಸಲಾಗಿತ್ತು. ದೊಡ್ಡಮಟ್ಟದ ಪ್ರಚಾರ ಕೊಟ್ಟು ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಸುನೀಲ್ ಕುಮಾರ್ ಅವರ ನಿಜ ಬಣ್ಣ ಬಯಲಾಗಿದೆ. ಅರ್ಧ ಭಾಗವಷ್ಟೇ ಕಂಚಿನ ಪ್ರತಿಮೆಯಾಗಿದ್ದು ಉಳಿದ ಅರ್ಧ ಭಾಗವು ಸಿಮೆಂಟ್ ಅಥವಾ ಇತರ ಯಾವುದೇ ವಸ್ತುವಿನಿಂದ ನಿರ್ಮಿಸಿರುವುದು ಸಾಬೀತಾಗಿದೆ.

ಇದು ಹಿಂದೂಗಳು ಪೂಜಿಸಿಕೊಂಡು ಬಂದಿರುವ ಪರಶುರಾಮ ದೇವರಿಗೆ ಮಾಡಿದ ದ್ರೋಹ. ಸದಾ ಹಿಂದುತ್ವ ಎಂದು ಬಡಾಯಿಕೊಚ್ಚುವ ಸುನೀಲ್ ಕುಮಾರ್ ಅವರು ತಮ್ಮ ಲಾಭಕ್ಕಾಗಿ ಯಾವುದೇ ರೀತಿಯ ಮೋಸ ಮಾಡಲು ಸಿದ್ದ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಇದು ಕಂಚಿನ ಮೂರ್ತಿಯಲ್ಲ ಎಂದು ಒಪ್ಪಿಕೊಂಡಿದ್ದರು. ಅದರ ಬಳಿಕ ಕಳೆದೆರಡು ದಿನಗಳಿಂದ ನೈಜ ಮೂರ್ತಿಯ ಭಾಗಗಳು ದೊಡ್ಡ ದೊಡ್ಡ ಲಾರಿಗಳಲ್ಲಿ ಕಾರ್ಕಳಕ್ಕೆ ಆಗಮಿಸಿದ್ದು ಮೂರ್ತಿಯ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಾರ್ಕಳ ಹಾಗೂ ಉಡುಪಿ ಜಿಲ್ಲೆಯ ಜನರಿಗೆ ಇಷ್ಟೊಂದು ದೊಡ್ಡ ಮೋಸ ಮಾಡಿದ್ದಲ್ಲದೆ ಹಿಂದೂಗಳ ಭಾವನೆಗಳೊಂದಿಗೆ ಆಟವಾಡಿರುವ ಬಿಜೆಪಿಯ ಶಾಸಕ‌ ಸುನೀಲ್ ಕುಮಾರ್ ಅವರು ಇದಕ್ಕೆ ನೇರ ಹೋಣೆಗಾರರಾಗಿದ್ದಾರೆ.
ಈಗಾಗಲೇ ಹಳೆಯ ಮೂರ್ತಿಗಾಗಿ ಹಣವನ್ನು ಕೂಡ ಪಾವತಿಸಲಾಗಿದ್ದು, ಮತ್ತೆ ಹೊಸ ಮೂರ್ತಿ ಪ್ರತಿಷ್ಠಾಪನೆ ಹೆಸರಿನಲ್ಲಿ ದುಂದುವೆಚ್ಚ ಮಾಡಲಾಗುತ್ತಿದೆ. ಇದೆಲ್ಲವುದರ ಬಗ್ಗೆ ವಿಸ್ತ್ರತ ತನಿಖೆಯ ನಡೆಯಬೇಕು. ಇದರಿಂದ ಆಗಿರುವ ನಷ್ಟವನ್ನು ಸ್ವತಃ ಸುನೀಲ್ ಕುಮಾರ್ ಅವರು ತಮ್ಮ ವೈಯುಕ್ತಿಕ ಖರ್ಚಿನಿಂದ ನೀಡಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಿರುವ ಶಾಸಕ ಸುನೀಲ್ ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

spot_img

More articles

LEAVE A REPLY

Please enter your comment!
Please enter your name here